ಚಿತ್ರದುರ್ಗ: ಜಿಲ್ಲಾದ್ಯಂತ ಸೋಮವಾರ ರಾತ್ರಿ ಸುರಿದ ಮಳೆಗೆ 120 ಮನೆಗಳು ಭಾಗಶಃ, 7 ಸಣ್ಣ ಜಾನುವಾರು, 10 ಹೆಕ್ಟೇರ್ ಕೃಷಿ, 8 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿ ಉಂಟಾಗಿದೆ. 51 ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತ ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರು ಮಳೆಯಿಂದಾದ ಹಾನಿ ಸಂಬಂಧ ವಿವರವನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಚಿತ್ರದುರ್ಗ ತಾಲೂಕಿನಲ್ಲಿ 35 ಮನೆ, ಚಳ್ಳಕೆರೆ-40, ಹೊಳಲ್ಕೆರೆ-13, ಹೊಸದುರ್ಗ-9, ಹಿರಿಯೂರು-11, ಮೊಳಕಾಲ್ಮೂರು ತಾಲೂಕಿನಲ್ಲಿ 12 ಮನೆಗಳು ಭಾಗಶಃ ಹಾನಿಯಾಗಿವೆ.
ಚಳ್ಳಕೆರೆ-36.3 ಮಿ.ಮೀ, ಚಿತ್ರದುರ್ಗ-22.7, ಹಿರಿಯೂರು-19.4, ಹೊಳಲ್ಕೆರೆ-11.5, ಹೊಸದುರ್ಗ-33.2, ಮೊಳಕಾಲ್ಮೂರು ತಾಲೂಕಿನಲ್ಲಿ 21.6 ಸೇರಿ ವಿವರದನ್ವಯ ಜಿಲ್ಲೆಯಲ್ಲಿ ಸರಾಸರಿ 25.6 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ: ಜಿಲ್ಲೆಯ ವಿವಿಧೆಡೆ ಸೋಮವಾರ ಅಧಿಕ ಮಳೆಯಾಗಿದ್ದು, ಚಳ್ಳಕೆರೆ ತಾಲೂಕು ಮಹದೇವಪುರದಲ್ಲಿ 108.3 ಮಿ.ಮೀ ಮಳೆ ದಾಖಲಾಗಿದೆ. ಜಗಳೂರು-ನಾಯಕನಹಟ್ಟಿ-ಚಳ್ಳಕೆರೆ ರಾಜ್ಯ ಹೆದ್ದಾರಿ 45ರಲ್ಲಿ ಸಂಚಾರ ಬಂದ್ ಆಗಿದೆ. ಚಿತ್ರದುರ್ಗ ತಾಲೂಕು ಲಕ್ಷ್ಮೀಸಾಗರದ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ. ಹಲವೆಡೆ ಕೆರೆಕಟ್ಟಿಗಳು ಭರ್ತಿಯಾಗಿ ಕೋಡಿ ಬೀಳುವುದು ಮುಂದುವರಿದಿದೆ.