ಮೈಸೂರು: ಮಳೆ ಮತ್ತು ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಧಾವಿಸುತ್ತಿಲ್ಲ ಎಂದು ಆರೋಪಿಸಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಡಳಿತಗಳಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
10-15 ದಿನಗಳಿಂದ ರಾಜ್ಯಾದ್ಯಂತ ವ್ಯಾಪಕ ಮಳೆ ಸುರಿಯುತ್ತಿದ್ದು, ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಿಂದ ಅತಿವೃಷ್ಟಿ ಉಂಟಾಗಿದ್ದು, ರೈತರು ಭಾರಿ ನಷ್ಟಕ್ಕೊಳಗಾಗಿದ್ದಾರೆ. ಆದರೆ ಯಾವೊಬ್ಬ ಜಿಲ್ಲಾ ಉಸ್ತುವಾರಿ ಸಚಿವರೂ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿಲ್ಲ. ತೊಂದರೆಗೀಡಾದ ಜನರಿಗೆ ಅಧಿಕಾರಿಗಳು ನೆರವು ನೀಡಿಲ್ಲ ಎಂದು ದೂರಿದರು.
ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಕಲೆ ಹಾಕುವುದರಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಲ್ಲಿ ನಿರತವಾಗಿವೆ. ಯಾವುದೇ ಪಕ್ಷಕ್ಕೂ ಜನರ ಸಂಕಷ್ಟಗಳಿಗೆ ನೆರವಾಗಲು ಸಮಯವಿಲ್ಲ. ಕೇವಲ ಚುನಾವಣೆಯತ್ತ ಗಮನ ಹರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೂ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಅಭಾವ ಉಂಟಾಗಿದೆ. ಕೃಷಿ ಸಚಿವರ ತವರು ಹಾವೇರಿ ಜಿಲ್ಲೆಯಲ್ಲೇ ನಕಲಿ, ಕಳಪೆ ರಸಗೊಬ್ಬರ ದಂಧೆ ಮಿತಿ ಮೀರಿದೆ ಎಂದು ದೂರಿದರು.
ರೈತರ ಸಾಲ ಮನ್ನಾ ಮಾಡಲು ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಹೊಸ ಸಾಲ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರೈತರ ಸಾಲಮನ್ನಾ ಮಾಡಲು ಮುಂದಾಗದ ಕೇಂದ್ರ ಸರ್ಕಾರ 10 ಸಾವಿರಕ್ಕೂ ಹೆಚ್ಚು ಉದ್ದಿಮೆದಾರರ ಸಾಲ ಮನ್ನಾ ಮಾಡಿದೆ. ಯಾವ ಕಾರಣದಿಂದ ಈ ಎಲ್ಲ ಉದ್ದಿಮೆದಾರರ ಸಾಲ ಮನ್ನಾ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಸಾಲ ಮನ್ನಾ ಮಾಡಿರುವ ಉದ್ದಿಮೆದಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ನೈಲಾನ್ ಧ್ವಜ ಬಳಸಲ್ಲ:
ಗಾಂಧಿವಾದಿಗಳು ಹಲವು ದಿನಗಳಿಂದ ನಡೆಸುತ್ತಿರುವ ನಮ್ಮ ಧ್ವಜ ಸತ್ಯಾಗ್ರಹಕ್ಕೆ ರೈತ ಸಂಘದ ಬೆಂಬಲ ಇದೆ. ಖಾದಿಯಿಂದ ಉತ್ಪಾದನೆ ಮಾಡಿದ ರಾಷ್ಟ್ರಧ್ವಜವನ್ನು ನಾವು ಹಾರಿಸುತ್ತೇವೆ. ಪ್ರಧಾನಿ ಮೋದಿ ಹೇಳಿದ ನೈಲಾನ್ ಧ್ವಜ ಬಳಸಲ್ಲ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.
ಅಲ್ಪಾವಧಿ ಸೇನಾ ನೇಮಕಾತಿ ಅಗ್ನಿಪಥ ಯೋಜನೆ ವಿರೋಧಿಸಿ ಆ.9ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಧುಚಂದ್ರ ಮತ್ತಿತರರು ಹಾಜರಿದ್ದರು.