ಬಾಗಲಕೋಟೆ: ಯುದ್ದದಂತಹ ಸನ್ನಿವೇಶ ಹಾಗೂ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ನಾಗರಿಕ ಸುರಕ್ಷತಾ ಅಣಕು ಕಾರ್ಯಾಚರಣೆ ನಡೆಸಲಾಯಿತು.
ಜಿಲ್ಲಾಡಳಿತ ಭವನದಲ್ಲಿ ಬೆಳಿಗ್ಗೆ 9 ಗಂಟೆಗೆ ವಿವಿದೆಡೆ ಸ್ಪೋಟಗೊಂಡ ಡಮ್ಮಿ ಬುಲೆಟ್‍ಗಳ ಸದ್ದು ಕೇಳಿದ ತಕ್ಷಣ ಆಡಳಿತ ಭವನದಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಗಾಬರಿಗೊಂಡು ಓಡುತ್ತಿರುವುದು, ಉಗ್ರಗಾಮಿಗಳು ಆಡಳಿತ ಭವನ ಪ್ರವೇಶ ಮಾಡಿರುವ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಮ್‍ಗೆ ಸಂದೇಶ ರವಾನೆಯಾಯಿತು. ಆ ವೇಳೆಗಾಗಲೇ ಬಾಂಬ್ ಸ್ಪೋಟಗೊಂಡು ಹಲವು ವ್ಯಕ್ತಿಗಳು ಮೃತಪಟ್ಟಿರುವ ಸನ್ನವೇಶ ಉಂಟು ಮಾಡಲಾಯಿತು. ಈ ವೇಳೆ ರಕ್ಷಣಾ ಕಾರ್ಯ ವಿಳಂಬವಿಲ್ಲದೇ ನಡೆಯಿತು.
ಕಾರ್ಯಾಚರಣೆಗೆ ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಂಚಾರಿ ಪೊಲೀಸ್, ಎನ್.ಸಿ.ಸಿ ಕಮಾಂಡ ತಂಡ ದಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಆರೋಗ್ಯ ಇಲಾಖೆಯ ಅಂಬುಲೇನ್ಸ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗಾಯಾಳುಗಳನ್ನು ರಕ್ಷಣೆ ಮಾಡಿದರು. ಆಡಳಿತ ಭವನದಲ್ಲಿ ರಕ್ಷಣೆ ತಂಡ ಸುತ್ತುವರೆದಿರುವ ಸನ್ನಿವೇಶ, ಭವನದಲ್ಲಿ ಅಡಗಿಕೊಂಡಿರುವ ಉಗ್ರರನ್ನು ಸದೆಬಡೆದು ಜನರನ್ನು ರಕ್ಷಿಸುವ ಅಣಕು ಪ್ರಾತ್ಯಕ್ಷಿಕೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಸೈರನ್‍ಗಳು ಮೊಳಗಿಸಿರುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸೈರನ್ ಮೊಳಗಿದಾಗ ನಾಗರಿಕರು ಹೇಗೆ ಪ್ರತಿಕ್ರಿಯಿಸಬೇಕು. ಬಾಂಬ್ ಸ್ಪೋಟವಾದರೆ ಏನು ಮಾಡಬೇಕು. ಅವಶೇಷಗಳಡಿ ಸಿಲುಕಿರುವವರನ್ನು ಹೇಗೆ ರಕ್ಷಿಸಬೇಕು. ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಅಣಕು ಪ್ರದರ್ಶನದ ಮೂಲಕ ತಿಳಿಸಿಕೊಡಲಾಯಿತು. ಜಿಲ್ಲಾಡಳಿತ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಯೇ ಇಂತಹದೊಂದಿ ಅಣಕು ಪ್ರದರ್ಶನ ನಡೆದ ಹಿನ್ನಲೆಯಲ್ಲಿ ದಾಳಿ ನಡೆದ ಸಂದರ್ಭದಲ್ಲಿ ಆಡಳಿತ ಭವನದಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಹೋಗುವ ದೃಶ್ಯ ನಂತರ ಅಲ್ಲಿನ ಕಾರ್ಯಾಚರಣೆ ಸನ್ನಿವೇಶಗಳನ್ನು ಕುತೂಹಲದಿಂದ ವಿಕ್ಷಣೆ ಮಾಡಿದರು.
ಅಣಕು ಪ್ರದರ್ಶನದಲ್ಲಿ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರೀಯ ದಳ, ಸ್ವಾನಗಳ ತಂಡ, ಸಂಚಾರಿ ಪೊಲೀಸ್, ಎನ್.ಸಿ.ಸಿ ಕಮಾಂಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ 300ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್, ಜಿಲ್ಲಾಧಿಕಾರ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಸಿಇಓ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.