ಜಿಲ್ಲೆ

ಜಿಲ್ಲಾಡಳಿತ ಭವನದಲ್ಲಿ ಆತ್ಮಹತ್ಯೆಗೆ ಯತ್ನ

ಕೊಪ್ಪಳ:ನಗರ ಜಿಲ್ಲಾಡಳಿತ ಭವನದಲ್ಲಿ ವ್ಯಕ್ತಿಯೊಬ್ಬ ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.


ಈತನನ್ನು ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ ಲಕ್ಷ್ಮಣ ರಾಮಣ್ಣ ಬಂಡಿವಡ್ಡರ(42) ಎಂದು ಗುರುತಿಸಲಾಗಿದೆ. ಭವನದಲ್ಲಿ ವಿಷ ಸೇವಿಸಿ ಮಲಗಿದ್ದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸ್ಥಿತಿ ಗಂಭೀರವಾಗಿದೆ.

ಈತನ ಬಳಿ ಎರಡು ವಿಷದ ಬಾಟಲ್‌ಗಳು ಹಾಗೂ ಒಂದು ಚೀಟಿ ದೊರೆತಿದೆ. ಅದರಲ್ಲಿ ದಾವಣಗೆರೆ ಕೆವಿಆರ್ ಕನ್ಸ್ಟ್ರಕ್ಷನ್, ನಾರಾಯಣಪ್ಪ, ಪ್ರಜ್ವಲ್, ಶ್ರೀನಿವಾಸರಡ್ಡಿ, ವೆಂಕಟರಾಯರಡ್ಡಿ ಎಂಬುವರ ಹೆಸರು, ಮೊಬೈಲ್ ಸಂಖ್ಯೆ ಬರೆದಿದ್ದು, ಹಣ ನೀಡಬೇಕೆಂದು ಬರೆಯಲಾಗಿದೆ. ಆದರೆ, ಈತ ಕೊಪ್ಪಳಕ್ಕೆ ಆಗಮಿಸಿದ್ದು ಯಾಕೆ, ಜಿಲ್ಲಾಡಳಿತ ಭವನದಲ್ಲಿ ವಿಷ ಸೇವಿಸಿದ್ದು ಯಾಕೆಂಬುದು ಗೊತ್ತಾಗಿಲ್ಲ. ಡಿವೈಎಸ್ಪಿ ಶರಣಪ್ಪ ಸುಬೇದಾರ, ನಗರಠಾಣೆ ಪಿಐ ಸಂತೋಷ ಹಳ್ಳೂರು ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.