ಜಿಲ್ಲೆ

ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಚಾರ ಸಾಮಗ್ರಿ ಬಿಡುಗಡೆ

ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಮಾ.27ರಿಂದ 2 ದಿನಗಳ ಕಾಲ ನಡೆಯಲಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಗುರುವಾರ ಬಿಡುಗಡೆಗೊಳಿಸಿದರು.

27ರಂದು ಬೆಳಗ್ಗೆ 8 ಕ್ಕೆ ಹೊಳಲ್ಕೆರೆ ಸಂವಿಧಾನ ಸೌಧದ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಲಿದೆ. ರಾಷ್ಟ್ರಧ್ವಜವನ್ನು ಶಾಸಕ ಡಾ.ಎಂ. ಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಪರಿಷತ್ ತಾಲೂಕು ಅಧ್ಯಕ್ಷ ಎನ್. ಶಿವಮೂರ್ತಿ ನೆರವೇರಿಸಲಿದ್ದಾರೆ. 9ಕ್ಕೆ ಸಮ್ಮೇಳನಾಧ್ಯಕ್ಷ ಪ್ರೊ.ಜಿ. ಪರಮೇಶ್ವರಪ್ಪ ಮತ್ತು ಕಲಾತಂಡಗಳ ಮೆರವಣಿಗೆ ಜರುಗಲಿದೆ. ಮೆರವಣಿಗೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜಿ. ಸೋಮಶೇಖರ್ ಮತ್ತು ಎಸ್ಪಿ ರಂಜಿತ್‌ಕುಮಾರ್ ಬಂಡಾರು ಚಾಲನೆ ನೀಡಲಿದ್ದಾರೆ.

ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಮಹಿಬೂಬ್ ಜಿಲಾನ್ ಸೇರಿ ಪುರಸಭೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉಸ್ತುವಾರಿ ಸಚಿವ ಡಿ. ಸುಧಾಕರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಸೇರಿ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಶಿರಹಟ್ಟಿ ಬಾಳೆಹೊಸೂರು ಭಾವೈಕ್ಯ ಸಂಸ್ಥಾನದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ ಕವಿಗೋಷ್ಠಿ, ಸಾಹಿತ್ಯ, ಸಂಸ್ಕೃತಿ, ಕೃಷಿ ಮತ್ತು ಶಿಕ್ಷಣ ಸೇರಿ ನಾನಾ ಗೋಷ್ಠಿಗಳು ಜರುಗಲಿವೆ.

ಪ್ರಚಾರ ಸಾಮಗ್ರಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ಕಸಾಪ ಹೊಳಲ್ಕೆರೆ ತಾಲೂಕು ಅಧ್ಯಕ್ಷ ಎನ್. ಶಿವಮೂರ್ತಿ, ಚಿತ್ರದುರ್ಗ ಅಧ್ಯಕ್ಷ ವಿ.ಎಲ್.ಪ್ರಶಾಂತ್, ಜಿಲ್ಲಾ ಕಾರ್ಯದರ್ಶಿ ಮಳಲಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ವಿ. ಧನಂಜಯ, ಖಜಾಂಚಿ ಸಿ. ಲೋಕೇಶ್, ಉಪನ್ಯಾಸಕ ದೊಡ್ಡಯ್ಯ, ಹೊಳಲ್ಕೆರೆ ದೇವರಾಜ್, ರೇವಣಸಿದ್ದಪ್ಪ ಇತರರಿದ್ದರು.