ಚಿತ್ರದುರ್ಗ:ಮುಂಬೈನ ಎನ್‌ಎಫ್‌ಎಸ್‌ಸಿಒಬಿ(National Federation of State co-operative Bank )ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಪಾತ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸೆಪ್ಟೆಂಬರ್26ರಂದು ರಾಜಸ್ಥಾನದ ಜೈಪುರದಲ್ಲಿ ಜರುಗಿದ ಸಮಾರಂಭ ದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ಉಲ್ಲಾ ಷರೀಫ್ ಅವರು,ದೇಶದ ಡಿಸಿಸಿ ಬ್ಯಾಂಕ್‌ಗಳಲ್ಲಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ 2ನೇ ಅತ್ಯುತ್ತಮ ಬ್ಯಾಂಕ್ ಎಂಬ ಪ್ರಶಸ್ತಿ ಮತ್ತು ಪಾರಿತೋಷಕವನ್ನು ಸ್ವೀಕರಿಸಿದ್ದಾರೆಂದರು.
ಈ ಸಂದರ್ಭದಲ್ಲಿ ರಾಜಸ್ಥಾನ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೇಯಾ,ಎನ್‌ಎಫ್‌ಎಸ್‌ಸಿಒಬಿ ಅಧ್ಯಕ್ಷ ಕೊಂಡೂರು ರವೀಂದ್ರರಾವ್,ಉಪಾಧ್ಯಕ್ಷ ಉಲ್ಲಾಸ್‌ದೇಸಾಯಿ,ರಾಜಸ್ಥಾನ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಭೀಮಾಸುಬ್ರಮಣ್ಯಂ,ಎಂಡಿ ಬೋಮರಾಮ್, ಕರ್ನಾಟಕ ಅಪೆಕ್ಸ್‌ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮತ್ತು ಸಿಇಒ ಸಿ.ಎನ್.ದೇವರಾಜ್ ಅವರು ಸಮಾರಂಭದಲ್ಲಿ ಇದ್ದರು.
ದೇಶದಲ್ಲಿ ಅತ್ಯುತ್ತಮ ಮೊದಲ ಬ್ಯಾಂಕ್ ಎಂದು ತೆಲಂಗಾಣ ರಾಜ್ಯದ ಕರೀಂನಗರದ ಡಿಸಿಸಿ ಬ್ಯಾಂಕ್ ಹಾಗೂ ರಾಜಸ್ಥಾನ ಜಯ ಪುರದ ಡಿಸಿಸಿ ಬ್ಯಾಂಕ್ 3ನೇ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿವೆ. ಆಡಳಿತ ನಿರ್ವಹಣೆ,ಕಂಪ್ಯೂಟರೀಕರಣ,ಸಾಲವಿತರಣೆ,ವಸೂಲಾತಿ ಯೊಂದಿಗೆ ಉತ್ತಮ ವಹಿವಾಟಿನ ಅಂಶಗಳನ್ನು ಆಧರಿಸಿ ಎನ್‌ಎಫ್‌ಎಸ್‌ಸಿಒಬಿ ನಮ್ಮ ಬ್ಯಾಂಕಿಗೆ ರಾಷ್ಟ್ರೀಯ ಮಟ್ಟದ ಮನ್ನಣೆ ನೀಡಿದೆ.
2017-18ನೇ ಸಾಲಿನಲ್ಲಿ ಕರ್ನಾಟಕದಲ್ಲಿರುವ 21 ಡಿಸಿಸಿ ಬ್ಯಾಂಕ್‌ಗಳ ಪೈಕಿ ನಮ್ಮ ಬ್ಯಾಂಕ್ ರಾಜ್ಯದಲ್ಲಿ ಮೊದಲ ಉತ್ತಮ ಬ್ಯಾಂಕೆಂ ದು ಅಪೆಕ್ಸ್‌ಬ್ಯಾಂಕ್ ಗೌರವಿಸಿತ್ತು. 2019-20ನೇ ಸಾಲಿನಲ್ಲೂ ಅಪೆಕ್ಸ್ ಬ್ಯಾಂಕಿನಿಂದ ರಾಜ್ಯಮಟ್ಟದಲ್ಲಿ ದ್ವಿತೀಯ ಅತ್ಯುತ್ತಮ ಬ್ಯಾಂಕೆಂದು ಗುರುತಿಸಿಕೊಂಡಿತ್ತು ಎಂದರು.
ವಾಣಿಜ್ಯ ಮತ್ತು ಖಾಸಗಿ ಬ್ಯಾಂಕ್‌ಗಳ ಪೈಪೋಟಿ ನಡುವೆ ನಮ್ಮ ಬ್ಯಾಂಕ್ 509 ಕೋಟಿ ರೂ.ಠೇವಣಿ ಸಂಗ್ರಹಿಸಿದೆ. 2022-23ನೇ ಸಾಲಿನಲ್ಲಿ 56803 ರೈತರಿಗೆ 462 ಕೋಟಿ ರೂ.ಕೃಷಿ ಸಾಲ ವಿತರಿಸಿದೆ. ಜಿಲ್ಲೆಯಲ್ಲಿ ಹೊಸದಾಗಿ ಎಂಟು ಶಾಖೆಗಳನ್ನು ಸ್ಥಾಪಿಸಲು ಆರ್‌ಬಿಐ ಅನುಮತಿ ನೀಡಿದೆ ಎಂದ ಸಚಿವರು,67 ವರ್ಷದ ಬ್ಯಾಂಕಿನ ಸಾಧನೆಯನ್ನು ವಿವರಿಸಿದರು.
ಶಾಸಕ ಟಿ.ರಘುಮೂರ್ತಿ,ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ಉಲ್ಲಾ ಷರೀಫ್,ನಿರ್ದೇಶಕರಾದ ಟಿ.ಮಹಾಂತೇಶ್,ಮಾಧುರಿಗಿರೀಶ್,ನಿಶಾನಿ ಜಯಣ್ಣ,ರಘುರಾಂರೆಡ್ಡಿ,ಶಶಿಧರ್ ಹಾಗೂ ದ್ಯಾಮಣ್ಣ ಉಪಸ್ಥಿತರಿದ್ದರು.