ಕೊಪ್ಪಳ:ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಶ್ರಮದಿಂದ ಅಧ್ಯಯನ ನಡೆಸಿದಲ್ಲಿ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಿ. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಿ. ನಾನು ಓದಲು ಬಂದಿರುವೆ. ಓದಬೇಕು ಎಂಬ ಪ್ರಜ್ಞೆ ಸದಾ ಜಾಗೃತವಾಗಿರಲಿ. ನಿರಂತರ ಅಧ್ಯಯನದಿಂದ ಯಶಸ್ಸು ಗಳಿಸಬಹುದು. ಅದಕ್ಕೆ ತಕ್ಕ ಶ್ರಮ ಹಾಕಬೇಕಷ್ಟೆ ಎಂದು ಸಲಹೆ ನೀಡಿದರು.
ಎಡಿಸಿ ಸಾವಿತಿ ಕಡಿ ಮಾತನಾಡಿ, ಇಂದಿನ ಮಕ್ಕಳೇ ನಾಳೆಯ ಭವ್ಯ ಪ್ರಜೆಗಳು. ವಿದ್ಯಾರ್ಥಿಗಳು ನಾಡಿನ ಸಂಪತ್ತು. ‘ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ಯುವ ಶಕ್ತಿ ನಮಗೆಲ್ಲರಿಗೂ ಸ್ಪೂರ್ತಿ. ಇಂತಹ ಯುವ ಉತ್ಸವ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ. ನಿಮ್ಮ ಶಕ್ತಿ, ಪ್ರತಿಭೆ ನಾಡು,ದೇಶದ ಅಭಿವೃದ್ಧಿಗೆ ಪೂರಕವಾಗಿರಲಿ ಎಂದರು.
ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತೋಟಗಾರಿಕೆ ಇಲಾಖೆಗಳು ಮಳಿಗೆಗಳ ಮೂಲಕ ತಮ್ಮ ಇಲಾಖೆ ಯೋಜನೆ ಪ್ರಚಾರ ನಡೆಸಿದರು. ವಿದ್ಯಾರ್ಥಿಗಳು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಪಡೆದರು.
ನೆಹರು ಯುವ ಕೇಂದ್ರದ ಮಾಂಟು ಪಾತರ್, ಕಾಲೇಜು ಪ್ರಾಚಾರ್ಯ ಪ್ರೊ.ತಿಮ್ಮಾರೆಡ್ಡಿ ಮೇಟಿ, ಪ್ರಾಧ್ಯಾಪಕಿ ಡಾ.ಭಾಗ್ಯಜ್ಯೋತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ ಗೊಂಡಬಾಳ, ರಾಮರಾವ ಬಿರಾದಾರ ಇತರರಿದ್ದರು.