ಮಂಗಳೂರು: ಮಕ್ಕಳ ರಕ್ಷಣಾ ವ್ಯವಸ್ಥೆ ಮತ್ತು ಸವಲತ್ತುಗಳನ್ನು ಪಡೆದುಕೊಳ್ಳುವುದರ ಬಗ್ಗೆ ಮಕ್ಕಳಿಗೆ ಹೆಚ್ಚಿನ ಅರಿವಿರಬೇಕು. ಪತ್ರಿಯೊಬ್ಬ ಮಕ್ಕಳು ವೇದಿಕೆ ಬಂದು ಮಾತನಾಡಬೇಕು, ಸಿಕ್ಕಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶರಾದ ಶೋಭಾ ಬಿ.ಜಿ ಹೇಳಿದರು.
ಯೂನಿಸೆಫ್, ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಜಿಲ್ಲಾ ಬಾಲ ಭವನ ಕದ್ರಿ, ಶಿಕ್ಷಣ ಸಂಪನ್ಮೂಲ ಕೇಂದ್ರ ಒಕ್ಕೂಟ, ಪಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ ಜಿಲ್ಲೆ ಇವರ ಸಹಭಾಗಿತ್ವದಲ್ಲಿ ಮಂಗಳವಾರ ಕದ್ರಿ ಬಾಲಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಹೆತ್ತವರು, ಶಿಕ್ಷಕರ ಪಾತ್ರ ಅತಿಮುಖ್ಯವಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಮಕ್ಕಳ ಹಕ್ಕುಗಳ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಮಕ್ಕಳ ಹಕ್ಕುಗಳ ಸಂಸತ್ ಸಹಕಾರಿಯಾಗಿದ್ದು, ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ಪಡಿ ಮಂಗಳೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜ ಮಾತನಾಡಿ, ಮಕ್ಕಳ ಹಕ್ಕುಗಳ ಭಾಗವಹಿಸುವಿಕೆಯ ಹಕ್ಕಿನ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಮಕ್ಕಳು ತಮ್ಮ ಸಮಸ್ಯೆಗಳನ್ನು ಮತ್ತು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತಾರೆ, ಈಗಾಗಲೇ ಪ್ರಾರಂಭಗೊಂಡಿದೆ, ಈ ಒಂದು ಹಂತ ನವೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದಲ್ಲಿ ಬೇರೆ ಬೇರೆ ಜಿಲ್ಲೆಯ ಮಕ್ಕಳು ಬಂದು ಮಾತನಾಡಲಿಕ್ಕೆ ಅವಕಾಶವಿರುತ್ತದೆ. ಅಂತಹ ಒಂದು ಪೂರ್ವಭಾವಿ ಸಭೆಯಾದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಹಿರಿಯ ಕಾರ್ಮಿಕ ಇನ್ಸ್ಪೆಕ್ಟರ್ ಮೇರಿ ಡಯಾಸ್, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾದ ಕಮಲ ಗೌಡ, ಉಪಾಧ್ಯಕ್ಷರಾದ ಉಷಾ ನಾಯ್ಕ ಉಪಸ್ಥಿತಿ ಇದ್ದರು, ಕಮಲಗೌಡ ಸ್ವಾಗತಿಸಿದರು. ಧನ್ಯ ವಂದಿಸಿದರು.