ಜಿಲ್ಲೆ

ಪ್ರತಿಭೆ ಯಾರ ಆಸ್ತಿಯೂ ಅಲ್ಲ

ಚಿತ್ರದುರ್ಗ: ಜಂಗಮ ಸಮಾಜ ತನ್ನ ಮೂಲ ಮಂತ್ರವಾದ ಶಿಕ್ಷಣ ಮತ್ತು ಸಂಸ್ಕಾರವನ್ನು ಲಿಂಗಾಯತ ಸಮುದಾಯದ ಎಲ್ಲರಿಗೂ ಕಲಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.

ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ, ತಾಲೂಕು ಬೇಡ ಜಂಗಮ ಸಮಾಜಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 2024-25ನೇ ಸಾಲಿನ ಜಿಲ್ಲಾ ಪ್ರತಿಭಾ ಪುರಸ್ಕಾರ ಮತ್ತು ಶಿಷ್ಯವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಪ್ರತಿಭೆ ಯಾರ ಆಸ್ತಿಯೂ ಅಲ್ಲ. ಅದು ಸಾಧನೆ ಮಾಡಿದವರ ಬಳಿ ಇರುತ್ತದೆ. ಪರಿಶ್ರಮದಿಂದ ವಿದ್ಯೆಗಳಿಸಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಜಂಗಮ ಸಮಾಜ ತನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕಿದೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಂಘಟನೆ ಬಲಗೊಳಿಸಬೇಕಿದೆ. ಈ ಸಮಾಜಕ್ಕೆ ವೀರಶೈವ ಲಿಂಗಾಯತರಲ್ಲಿ ವಿಶೇಷ ಸ್ಥಾನವಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶಿಕ್ಷಣಕ್ಕೆ ತನ್ನದೇ ಆದ ಶಕ್ತಿ ಇದೆ. ಪಾಲಕರು ಮಕ್ಕಳಿಗೆ ಶಿಕ್ಷಣ ಕೂಡಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳ್ ವಿರಕ್ತಮಠದ ಶ್ರೀ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣರವರ ಕಾಲದಿಂದಲೂ ಜಂಗಮರಿಗೆ ಮಾನ್ಯತೆ ನೀಡಲಾಗಿದೆ. ಜಂಗಮ ತತ್ವಕ್ಕೆ ಅಮೂಲ್ಯ ಮೌಲ್ಯವಿದೆ ಎಂದರು.

ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ಅಧ್ಯಕ್ಷ ಸೋಮಶೇಖರ್ ಮಂಡಿಮಠ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ, ರಾಜ್ಯ ಬೇಡ ಸಮಾಜ ಸಂಸ್ಥೆ ಕಾರ್ಯಾಧ್ಯಕ್ಷ ಕೆ.ಎಂ. ವೀರೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ವೀರಶೈವ-ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಜೆ. ಶಿವಪ್ರಕಾಶ, ಜಿಲ್ಲಾ ವೀರಶೈವ-ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಜಿ. ಚಿದಾನಂದಪ್ಪ, ವೀರಶೈವ ಲಿಂಗಾಯತ, ಜಿಲ್ಲಾ ಶಿವಶಿಂಪಿ ಸಮಾಜದ ಅಧ್ಯಕ್ಷ ಇ.ಎಸ್. ಜಯದೇವಮೂರ್ತಿ, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್, ರುದ್ರೇಶ್‌ಐಗಳ್, ಜಿ.ಎಸ್. ಕಲ್ಲೇಶಯ್ಯ, ಕೆ.ಎಸ್. ಕಲ್ಮಠ, ಕೆ.ಎಚ್. ಪ್ರಭುಲಿಂಗಯ್ಯ, ಎಂ.ಸಿ.ತಿಪ್ಪೇಸ್ವಾಮಿ, ಸಿ.ಎಂ. ಸ್ವಾಮಿ, ಬಿ. ಶಿವಣ್ಣ, ಡಾ.ಎಂ.ಕೆ. ಪ್ರಭುದೇವ್,ಎಸ್. ಶಿವನಗೌಡ ಇತರರು ಇದ್ದರು.

ಎಸ್. ಷಡಾಕ್ಷರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜಯ್ಯಶಾಸ್ತ್ರಿ ವೇದ ಘೋಷ ವಾಚಿಸಿದರು. ಲೀಲಾವತಿ ಪ್ರಾರ್ಥಿಸಿದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಹಾಗೂ ಪಿ.ಎಚ್‌ಡಿ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.