ಹಾವೇರಿ: ಬಸನಗೌಡ ದೇಸಾಯಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಅ. 9ರಂದು ಮಧ್ಯಾಹ್ನ 3ಕ್ಕೆ ಜಿಪಂ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ.
ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಲ್ಲಿ ಜಿದ್ದಾಜಿದ್ದಿ ಆರಂಭಗೊಂಡಿದೆ. ಅಧ್ಯಕ್ಷ ಸ್ಥಾನದ ಅವಧಿ ಕೇವಲ 7 ತಿಂಗಳು ಉಳಿದಿದ್ದು, ನಾಲ್ಕೈದು ಆಕಾಂಕ್ಷಿಗಳು ಹೈಕಮಾಂಡ್ಗೆ ದುಂಬಾಲು ಬಿದ್ದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಸವಣೂರ ತಾಲೂಕು ಹತ್ತಿಮತ್ತೂರ ಜಿಪಂ ಕ್ಷೇತ್ರದ ಶಿವರಾಜ ಅಮರಾಪುರ, ರಾಣೆಬೆನ್ನೂರ ತಾಲೂಕು ಕಾಕೋಳ ಕ್ಷೇತ್ರದ ಏಕನಾಥ ಬಾನುವಳ್ಳಿ, ಹಾನಗಲ್ಲ ತಾಲೂಕು ಹಿರೂರು ಕ್ಷೇತ್ರದ ರಾಘವೇಂದ್ರ ತಹಸೀಲ್ದಾರ್, ಕಾರಡಗಿ ಕ್ಷೇತ್ರದ ರಮೇಶ ದುಗ್ಗತ್ತಿ, ಕಾಗಿನೆಲೆ ಕ್ಷೇತ್ರದ ಅಬ್ದುಲ್ವುುನಾಫ್ ಯಲಿಗಾರ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಒಟ್ಟು 34 ಸದಸ್ಯ ಬಲವಿದ್ದ ಜಿಪಂನಲ್ಲಿ ಸದ್ಯ ಬಸನಗೌಡ ದೇಸಾಯಿ ಅವರ ನಿಧನದಿಂದ ಸದಸ್ಯರ ಸಂಖ್ಯೆ 33ಕ್ಕಿಳಿದಿದೆ. ಅಧ್ಯಕ್ಷರಾಗಿ ಆಯ್ಕೆಯಾಗಲು 17 ಸದಸ್ಯರ ಬೆಂಬಲದ ಅವಶ್ಯಕತೆಯಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ 21 ಸದಸ್ಯರಿದ್ದು, ಬಿಜೆಪಿಯ 12 ಸದಸ್ಯರಿದ್ದಾರೆ. ಬಿಜೆಪಿಯು ಬಹುಮತದಿಂದ ಬಹುದೂರವಿದ್ದು, ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಹೀಗಾಗಿ, ಅವಿರೋಧ ಆಯ್ಕೆಯೇ ಬಹುತೇಕವಾಗಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಬ್ಬೊಬ್ಬರದ್ದು ಒಂದೊಂದು ಕಾರಣ: ‘ಐದು ವರ್ಷದ ಅವಧಿಯಲ್ಲಿ ಸವಣೂರ ತಾಲೂಕಿಗೆ ಒಮ್ಮೆಯೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಅವಕಾಶ ಲಭಿಸಿಲ್ಲ. ಹೀಗಾಗಿ, ಈಗಿರುವ ಅವಧಿಗೆ ಸವಣೂರ ತಾಲೂಕಿಗೆ ಅವಕಾಶ ಕಲ್ಪಿಸಬೇಕು’ ಎಂಬ ವಾದವನ್ನು ಶಿವರಾಜ ಅಮರಾಪುರ ಮಂಡಿಸಿದ್ದಾರೆ. ‘ರಾಣೆಬೆನ್ನೂರ ತಾಲೂಕಿಗೆ ಹಾಗೂ ರೆಡ್ಡಿ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು. ಅಲ್ಲದೆ, ಈವರೆಗಿನ ಅವಧಿಯಲ್ಲಿ ಯಾವುದೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಅವಕಾಶವೂ ಸಿಕ್ಕಿಲ್ಲ. ಹೀಗಾಗಿ, ಈ ಬಾರಿ ಅಧ್ಯಕ್ಷ ಸ್ಥಾನದ ಅವಕಾಶ ನೀಡಬೇಕು’ ಎಂದು ಹೈಕಮಾಂಡ್ ಮುಂದೆ ಏಕನಾಥ ಬಾನುವಳ್ಳಿ ವಾದ ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ.
‘ವಿಧಾನಸಭೆ ಚುನಾವಣೆಯಲ್ಲಿ ತಂದೆಗೆ ಟಿಕೆಟ್ ತಪ್ಪಿಸಲಾಗಿದೆ. ಜಿಪಂನಲ್ಲಾದರೂ ಅವಕಾಶ ಕಲ್ಪಿಸಬೇಕು’ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ಪುತ್ರ ರಾಘವೇಂದ್ರ ತಹಶೀಲ್ದಾರ ಮನವಿ ಮಾಡಿದ್ದಾರೆ. ಈ ಮೂವರ ಬೇಡಿಕೆಗಳನ್ನು ಗಮನಿಸಿರುವ ಹೈಕಮಾಂಡ್ ಶೀಘ್ರದಲ್ಲಿಯೇ ಸದಸ್ಯರ ಸಭೆ ಕರೆದು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸೂಚನೆ ನೀಡಿದೆ.
ಸಾಮಾನ್ಯ ವರ್ಗಕ್ಕೆ ಮೀಸಲು: ಜಿಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಭಾಗವಹಿಸುವವರು ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಕೆಯ ಮುಂಜಾಗ್ರತೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಸವಣೂರ ತಾಲೂಕಿಗೆ ಈವರೆಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಅವಕಾಶ ಸಿಕ್ಕಿಲ್ಲ. ಈ ವಿಷಯ ಎಲ್ಲ ಸದಸ್ಯರಿಗೂ ತಿಳಿದಿದೆ. ಹೀಗಾಗಿ, ಈ ಬಾರಿ ಸವಣೂರ ತಾಲೂಕಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಹೈಕಮಾಂಡ್ನ ಗಮನಕ್ಕೂ ತರಲಾಗುವುದು. | ಶಿವರಾಜ ಅಮರಾಪುರ ಜಿಪಂ ಸದಸ್ಯ
ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಎಲ್ಲ ಸದಸ್ಯರೊಂದಿಗೆ ರ್ಚಚಿಸಿದ್ದು ಬೆಂಬಲ ಸೂಚಿಸಿದ್ದಾರೆ. ಬ್ಯಾಡಗಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಬಹುಪಾಲು ಹಳ್ಳಿಗಳು ನನ್ನ ಕ್ಷೇತ್ರದಲ್ಲಿದ್ದು, ತಾಲೂಕು ರಾಣೆಬೆನ್ನೂರಾದರೂ ವಿಧಾನಸಭೆ ಕ್ಷೇತ್ರ ಬ್ಯಾಡಗಿಯಾಗಿದೆ. ಬ್ಯಾಡಗಿ ಕ್ಷೇತ್ರಕ್ಕೆ ಜಿಪಂನಲ್ಲಿ ಅವಕಾಶ ಲಭ್ಯವಾಗಿಲ್ಲ. ಈ ಬಾರಿಯಾದರೂ ಅವಕಾಶ ಕಲ್ಪಿಸಿ ಎಂದು ಹೈಕಮಾಂಡ್ಗೆ ವಿನಂತಿಸಿದ್ದೇನೆ. | ಏಕನಾಥ ಬಾನುವಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ