ಹಾಸನ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ನಡೆಸಿದ ಭಾರತ್ ಜೋಡೋ ಯಾತ್ರೆ ಅತ್ಯಂತ ಯಶಸ್ವಿಯಾಗಿದ್ದು, ಈಗ ಎರಡನೇ ಬಾರಿಗೆ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಹಮ್ಮಿಕೊಂಡಿದ್ದಾರೆ. ಆದರೆ ಬಿಜೆಪಿಗೆ ಈಗಲೇ ಸೋಲಿನ ಭೀತಿ ಶುರುವಾಗಿದ್ದು, ನಮ್ಮ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ಕಾರ್ಯಕರ್ತರ ಮೂಲಕ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಅಸ್ಸಾಂ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಅವರು ಕುಳಿತಿದ್ದ ಬಸ್ ಅನ್ನು ಅಡ್ಡಗಟ್ಟಿ ರೌಡಿಸಂ ಪ್ರದರ್ಶಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ವಿಚಾರವಾಗಿದೆ. ದೇಶದ ಜನ ಈ ಬಾರಿ ಚುನಾವಣೆಯಲ್ಲಿ ಇದಕ್ಕೆಲ್ಲ ತಕ್ಕ ಪಾಠ ಕಲಿಸುತ್ತಾರೆಂದು ಎಚ್ಚರಿಕೆ ನೀಡಿದರು. ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಕೂಗಲಾಯಿತು.ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್, ಮುನಿಸ್ವಾಮಿ, ಮಂಜುನಾಥ ಶರ್ಮಾ, ಯುವ ಘಟಕದ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಕಡಕಡಿ ಫಿರ್ ಸಬ್, ಶ್ರೀನಿವಾಸ್, ಮೊಹಮದ್ ಇಮ್ರಾನ್, ಆರಿಫ್ ಇತರರಿದ್ದರು.