ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಮಾ. 9 ರಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.24, 25 ಕ್ಕೆ ಮುಂದೂಡಲು ಸಮ್ಮೇಳನದ ಪೂರ್ವಭಾವಿ ಸಭೆ ನಿರ್ಧರಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಶಾಸಕ ಡಾ.ಎಂ.ಚಂದ್ರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಚಂದ್ರಪ್ಪ ಮಾತನಾಡಿ, ವಿಧಾನ ಮಂಡಲದ ಅಧಿವೇಶನ, ಜತೆಗೆ ಪರೀಕ್ಷೆಗಳು ನಡೆಯುತ್ತಿವೆ. ಇದು ಜಿಲ್ಲಾ ಸಮ್ಮೇಳನವಾದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಸಿದ್ಧತೆಗಳನ್ನು ತರಾತುರಿಯಾಗಿ ಮಾ ಡುವ ಬದಲು ಅಚ್ಚುಕಟ್ಟಾಗಿ ಮಾಡಬೇಕಿದೆ. ಸಮ್ಮೇಳನಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇನೆ. ಗೋಷ್ಠಿಗಳು, ಕಲಾತಂಡಗಳು ಸೇರಿದಂತೆ ಎಲ್ಲ ಕಾರ‌್ಯಕ್ರಮಗಳನ್ನು ರೂಪಿಸುವಂತೆ ಸಂಘಟಕರಿಗೆ ಶಾಸಕರು ಸೂಚಿಸಿದರು.
ಸಾಹಿತ್ಯ ಸಮ್ಮೇಳನ ಪ್ರಚಾರದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ತಹಸೀಲ್ದಾರ್ ಬೀಬೀ ಫಾತಿಮಾ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮೂರ್ತಿ, ತಾಪಂ ಇಒ ಪಿ.ವಿಶ್ವನಾಥ್, ಬಿಇಒ ಎಚ್.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಎಸ್.ರೇಣುಕಾ ದೇಸಾಯಿ ಇತರರಿದ್ದರು.