ಗದಗ: ಗದಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.27 ಮತ್ತು 28ರಂದು ಎರಡು ದಿನಗಳ ಕಾಲ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ. ಫೆ.27ರಂದು 9 ಗಂಟೆಗೆ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ರವೀಂದ್ರ ಕೊಪ್ಪರ ಅವರ ಮೆರವಣಿಗೆ ನಡೆಯಲಿದೆ.
ನಗರದ ಕಿತ್ತೂರ ಚನ್ನಮ್ಮ ವೃತ್ತದಿಂದ ಮಹಾವೀರ ವೃತ್ತ, ಟಿಪ್ಪು ಸುಲ್ತಾನ ವೃತ್ತದ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಭವನದವರೆಗೆ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ ಮೆರವಣಿಗೆಗೆ ಚಾಲನೆ ನೀಡುವರು.
ಬೆಳಗ್ಗೆ 10.30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿರುವ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಂ.ಡಿ. ಗೋಗೇರಿ, ಸಮ್ಮೇಳನಾಧ್ಯಕ್ಷ ಪ್ರೊ.ರವೀಂದ್ರ ಕೊಪ್ಪರ ಮಾತನಾಡುವರು. ಶಾಸಕ ಕಳಕಪ್ಪ ಬಂಡಿ ಪುಸ್ತಕ ಬಿಡುಗಡೆಗೊಳಿಸುವರು.
ಫೆ.27ರಂದು ಮಧ್ಯಾಹ್ನ ‘ಗದಗ ಜಿಲ್ಲಾ ಅವಲೋಕನ’ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅಧ್ಯಕ್ಷತೆ ವಹಿಸುವರು. ‘ಸಮಕಾಲೀನ ಸಾಹಿತ್ಯ’ ಕುರಿತು ಎರಡನೇ ಗೋಷ್ಠಿ ನಡೆಯಲಿದ್ದು, ಆರ್.ಎಲ್. ಪೊಲೀಸ್ಪಾಟೀಲ ಅಧ್ಯಕ್ಷತೆ ವಹಿಸುವರು. ಸಮ್ಮೇಳನ ಸರ್ವಾಧ್ಯಕ್ಷ ಪ್ರೊ.ರವೀಂದ್ರ ಕೊಪ್ಪರ ಮೂರನೇ ಸಂವಾದ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಅಂದಾನಪ್ಪ ವಿಭೂತಿ ಸಮ್ಮೇಳನಾಧ್ಯಕ್ಷರ ಬದುಕು ಮತ್ತು ಬರಹ ಕುರಿತು ವಿಷಯ ಮಂಡನೆ ಮಾಡುವರು. ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆ. 28ರಂದು ಬೆಳಗ್ಗೆ 9ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಶೋಭಾ ಮೇಟಿ ಅಧ್ಯಕ್ಷತೆ ವಹಿಸುವರು. ಡಾ.ರಾಜೇಂದ್ರ ಗಡಾದ ಗದಗ ಜಿಲ್ಲೆಯ ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯ ವಿಷಯ ಮಂಡನೆ ಮಾಡುವರು. ‘ಶಿಕ್ಷಣ ಮತ್ತು ಭಾಷೆ’ ಕುರಿತು ಗೋಷ್ಠಿ ನಡೆಯಲಿದ್ದು, ಬಸವರಾಜ ಗುರಿಕಾರ ಅಧ್ಯಕ್ಷತೆ ವಹಿಸುವರು. ಡಿಡಿಪಿಐ ಜಿ.ಎಂ. ಬಸವಲಿಂಗಪ್ಪ ಆಶಯನುಡಿ, ಪ್ರಕಾಶ ಮನ್ನಂಗಿ ಅವರು ಸರ್ಕಾರಿ ಶಾಲೆಗಳ ಸಬಲೀಕರಣ, ಐ.ಆರ್. ಅಕ್ಕಿ ಅವರು ‘ಪಾಲಕರು ಮತ್ತು ಇಂಗ್ಲಿಷ್ ವ್ಯಾಮೋಹ’, ಬಿಇಒ ಆರ್.ಎಸ್. ಬುರುಡಿ ಅವರು ‘ಕನ್ನಡ ಉಳಿವು ಮತ್ತು ಬೆಳವಣಿಗೆ’ ಕುರಿತು ವಿಷಯ ಮಂಡಿಸುವರು. ಸಂಜೆ 4ರಿಂದ ಬಹಿರಂಗ ಅಧಿವೇಶನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಅಧ್ಯಕ್ಷತೆ ವಹಿಸುವರು.
ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರೊ.ರವೀಂದ್ರ ಕೊಪ್ಪರ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.
ಕ್ರಿಯಾಶೀಲ ಬರಹಗಾರ ಕೊಪ್ಪರ
ಬರಹಗಾರ, ವಾಗ್ಮಿ, ಸಂಘಟಕ, ನಿವೃತ್ತ ಉಪನ್ಯಾಸಕ ಪ್ರೊ. ರವೀಂದ್ರ ಕೊಪ್ಪರ ಅವರಿಗೆ ಜಿಲ್ಲಾ 9ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೊಪ್ಪರ ಅವರು ತಮ್ಮ ಬದುಕಿನ ಲವಲವಿಕೆಯನ್ನು ತಮ್ಮ ಕೃತಿಗಳ ಮೂಲಕ ಕಾಪಾಡಿಕೊಂಡು ಬಂದ ಕ್ರಿಯಾಶೀಲ ಬರಹಗಾರರಾಗಿದ್ದಾರೆ. ಅವರು 50 ನೇ ವಯಸ್ಸಿನ ನಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. 35 ವರ್ಷಗಳ ಸುದೀರ್ಘ ಬೋಧನೆ, 25ಕ್ಕೂ ಹೆಚ್ಚು ಪಠ್ಯಪುಸ್ತಕಗಳು, ಕವನ ಸಂಕಲನ, ಪ್ರಬಂಧಗಳು, ಪತ್ರ ಲೇಖನ, ಪ್ರವಾಸಿ ಮಾರ್ಗದರ್ಶಿ, ಕಿರು ನಾಟಕಗಳು, ಜೀವನ ಚರಿತ್ರೆ, ಪ್ರಹಸನಗಳನ್ನು ರಚಿಸಿದ್ದಾರೆ.
ಸಮ್ಮೇಳನಕ್ಕಾಗಿ ಭಾರತರತ್ನ ಡಾ. ಪಂಡಿತ ಭೀಮಸೇನ ಜೋಶಿ, ಡಾ.ಪಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮಹಾದ್ವಾರಗಳು ಹಾಗೂ ಕುಮಾರವ್ಯಾಸ ಮಹಾಮಂಟಪ, ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಹಾವೇದಿಕೆ ನಿರ್ವಿುಸಲಾಗಿದೆ. | ಶರಣು ಗೋಗೇರಿ, ಕಸಾಪ ಜಿಲ್ಲಾಧ್ಯಕ್ಷ ಗದಗ