ಕಂಪ್ಲಿ: ಜನಾರ್ದನರೆಡ್ಡಿ ಹಾಗೂ ನನ್ನ ಜಗಳದ ಬಗ್ಗೆ ವಿಚಾರ ಮಾಡದೆ ಪಕ್ಷದ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಗೊಂದಲವನ್ನು ಪಕ್ಷದ ಹೈಕಮಾಂಡ್ ಸರಿಪಡಿಸಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕಂಪ್ಲಿ-ಕುರುಗೋಡು ಮಂಡಲ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು. ಬಳ್ಳಾರಿ ಆಸ್ಪತ್ರೆಗೆ ಹೋದ ನಮ್ಮ ಮಕ್ಕಳು ವಾಪಸ್ ಬರೋ ಪರಿಸ್ಥಿತಿ ಇಲ್ಲ. ಏಳೆಂಟು ಬಾಣಂತಿಯರು ಸತ್ತರೂ ಜಿಲ್ಲಾ ಉಸ್ತುವಾರಿ ಮಂತ್ರಿ ಇದ್ದಾರೋ-ಇಲ್ಲವೋ ಗೊತ್ತಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗೆ ದುರಹಂಕಾರವಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೆಸರು ಪ್ರಸ್ತಾಪಿಸದೆ ಹರಿಹಾಯ್ದರು.
ಬಿಜೆಪಿಯಿಂದ ಗೆದ್ದವರನ್ನು ಖರೀದಿ ಮಾಡಿ ಕಂಪ್ಲಿ ಪುರಸಭೆಯಲ್ಲಿ ಕಾಂಗ್ರೆಸ್ ವಾಮಮಾರ್ಗದಿಂದ ಅಧಿಕಾರ ಗಳಿಸಿದೆ. ತಾಕತ್ತಿದ್ದರೆ ಗೆದ್ದು ಅಧಿಕಾರ ಹಿಡಿಯಬೇಕಿತ್ತು ಎಂದು ಶಾಸಕ ಜೆ.ಎನ್.ಗಣೇಶ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಸಕಾಲದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯದ ಹಿನ್ನೆಲೆಯಲ್ಲಿ ರೈತರು ನಷ್ಟಕ್ಕೀಡಾಗಿದ್ದಾರೆ. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ತೆರೆಯಲು ನಾನು ಧ್ವನಿ ಎತ್ತಿದಾಗ ರೈತರು ಗಟ್ಟಿಯಾಗಿ ಬೆಂಬಲಿಸಲಿಲ್ಲ.
ಕಂಪ್ಲಿ ಸಕ್ಕರೆ ಕಾರ್ಖಾನೆ ವಿಚಾರ ನ್ಯಾಯಾಲಯದಲ್ಲಿದೆ. ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸರ್ಕಾರ ಅನುಮೋದನೆ ಕೊಟ್ಟಿಲ್ಲ. ಎಲ್ಲವೂ ಸರಿಹೋದ ಬಳಿಮ ಕಾರ್ಖಾನೆ ಆರಂಭಿಸಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.
ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಕ್ಷೇತ್ರದಲ್ಲಿ ಅದೇ ಪಕ್ಷದ ಶಾಸಕರಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಬಿಜೆಪಿ ಅವಧಿಯ ಅನುದಾನ ಬಳಕೆಯಾಗುತ್ತಿದ್ದು, ಹೊಸ ಅನುದಾನ ಕೊಡಲು ಸರ್ಕಾರದಲ್ಲಿ ಹಣ ಇಲ್ಲ ಎಂದು ಆರೋಪಿಸಿದರು.
ಕಂಪ್ಲಿ ಮಂಡಲ ಅಧ್ಯಕ್ಷರಾಗಿ ಸಿ.ಡಿ.ಮಹಾದೇವ, ಕುರುಗೋಡು ಮಂಡಲ ಅಧ್ಯಕ್ಷರಾಗಿ ಮದಿರೆ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದರು.
ಪ್ರಮುಖರಾದ ವೈ.ಸತೀಶ್, ಯರ‌್ರಂಗಳಿ ತಿಮ್ಮಾರೆಡ್ಡಿ, ಪಿ.ಬ್ರಹ್ಮಯ್ಯ, ರಬಿಯ ನಿಸಾರ್, ಮುರುಳಿಮೋಹನರೆಡ್ಡಿ, ಪುರಸಭೆ ಸದಸ್ಯರು, ಕಾರ್ಯಕರ್ತರು, ಇದ್ದರು.