ಹಾಸನ: ಹಾಸನ ಉಪಕಾರಾಗೃಹದಲ್ಲಿ ಖೈದಿಗಳು ಮೊಬೈಲ್ ಬಳಕೆ, ಗಾಂಜಾ, ಬೀಡಿ, ಸಿಗರೇಟ್ ಪತ್ತೆ ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದ ಮೇಲೆ ಕಾರಾಗೃಹದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಕಾರಾಗೃಹದ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಹಾಸನ ಉಪಕಾರಾಗೃಹದ ಪೊಲೀಸ್ ಅಧೀಕ್ಷಕ ಸುರೇಶ್, ಜೈಲರ್‌ಗಳಾದ ಖುತುಬುದ್ದೀನ್ ದೇಸಾಯಿ, ಜಾದವ್, ಪಾಟೀಲ್ ಅಮಾನತಾದ ಅಧಿಕಾರಿಗಳು.
ಜೈಲಿನೊಳಗಿರುವ ಖೈದಿಯೊಬ್ಬ ಜೈಲಿನ ಕರ್ಮಕಾಂಡದ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿದ್ದ. ಈ ಹಿನ್ನಲೆಯಲ್ಲಿ ಆ.19 ರಂದು ತಡರಾತ್ರಿ ನಗರದ ಜಿಲ್ಲಾ ಕಾರಾಗೃಹಕ್ಕೆ ಎಎಸ್‌ಪಿ ತಮ್ಮಯ್ಯ ಅವರ ನೇತೃತ್ವದಲ್ಲಿ 60ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ದಾಳಿ ನಡೆಸಿ 18 ಮೊಬೈಲ್, 20 ಗ್ರಾಂ ಗಾಂಜಾ, ಸಿಗರೇಟ್, ಬಿಡಿ, ಚಾರ್ಜರ್ ವಶಕಪಡಿಸಿಕೊಂಡಿತ್ತು.
ಕಾರಾಗೃಹ ಡಿಜಿಗೆ ವರದಿ ನೀಡಿದ್ದ ಎಸ್‌ಪಿ
ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಬಳಕೆ, ಗಾಂಜಾ ಸೇವನೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಹಾಗೂ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷೃ ಬಗ್ಗೆ ತನಿಖೆ ನಡೆಸಿ ಕಾರಾಗೃಹ ಡಿಜಿಗೆ ಹಾಸನ ಎಸ್‌ಪಿ ಹರಿರಾಂ ಶಂಕರ್ ಅವರು ವರದಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರ ಮೇಲೆ ಪ್ರಕರಣ ಕೂಡ ದಾಖಲಾಗಿದೆ. ಇದೀಗ ಕಾರಾಗೃಹ ಡಿಜಿ ಅವರು ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.