ಜಿಲ್ಲೆ

ಜಿಲ್ಲಾ ಆಸ್ಪತ್ರೆಯಲ್ಲಿ ಅಧ್ವಾನ

ಧಾರವಾಡ: ನಗರದ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕರೊನಾ ಹರಡುವಿಕೆ ತಡೆ ಹಾಗೂ ಚಿಕಿತ್ಸೆಗೆ ಶ್ರಮಿಸುತ್ತಿರುವುದು ಒಂದೆಡೆಯಾದರೆ, ಬಳಸಿದ ಪಿಪಿಇ ಕಿಟ್​ಗಳು, ಮಾಸ್ಕ್ ಹಾಗೂ ಕೈಗವಸುಗಳನ್ನು ಅದೇ ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಬಿಸಾಡಿರುವುದು ಭಾನುವಾರ ಕಂಡುಬಂದಿದೆ.

ಕರೊನಾ ಗುಣಲಕ್ಷಣ ಇರುವ ಹಾಗೂ ಶಂಕಿತ ನೂರಾರು ಜನ ಇಲ್ಲಿಗೆ ಆಗಮಿಸುತ್ತಾರೆ. ಅವರ ಗಂಟಲ ದ್ರವ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಮುಂಜಾಗ್ರತೆ ಕ್ರಮವಾಗಿ ಆಸ್ಪತ್ರೆ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿ, ಆಂಬುಲೆನ್ಸ್ ಚಾಲಕರು ಸೇರಿ ಪ್ರತಿಯೊಬ್ಬರೂ ಮಾಸ್ಕ್ ಹಾಗೂ ಗ್ಲೌಸ್​ಗಳನ್ನು ಬಳಸುತ್ತಾರೆ. ಹೀಗೆ ಬಳಸಿದ ಸುರಕ್ಷಾ ಸಾಮಗ್ರಿಗಳನ್ನು ಸೂಕ್ತವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಕರೊನಾ ಚಿಕಿತ್ಸಾ ತಾಣವಾಗಿರುವ ಜಿಲ್ಲಾ ಆಸ್ಪತ್ರೆಯು ರೋಗ ಹರಡುವ ತಾಣವಾಗಿ ಬದಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಪ್ರತಿಕ್ರಿಯೆಗೆ ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕರು, ಅಧಿಕಾರಿಗಳು ದೂರವಾಣಿ ಕರೆಗೆ ಸಿಗಲಿಲ್ಲ.

EndFragment