ಜಿಲ್ಲೆ

ಜಿಲ್ಲಾ ಆಸ್ಪತ್ರೆಗೆ ಸಚಿವ ಲಾಡ್ ಭೇಟಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಹಾಗೂ ವೈದ್ಯಾಧಿಕಾರಿಗಳು ನಿರ್ಲಕ್ಷೃ ಕಂಡ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಜಿಲ್ಲಾ ಆಸ್ಪತ್ರೆಗೆ ಬುಧವಾರ ಸಂಜೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಇಡೀ ಆಸ್ಪತ್ರೆ ಸುತ್ತಾಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಈ ವೇಳೆ ರೋಗಿಗಳ ತಪಾಸಣೆ ಹಾಗೂ ಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಗರಂ ಆಗಿ ತರಾಟೆ ತೆಗೆದುಕೊಂಡರು.
ಬೆಳಗ್ಗೆಯೇ ಆಸ್ಪತ್ರೆಗೆ ದಾಖಲಾಗಿದ್ದರೂ ಒಬ್ಬ ವೈದ್ಯರೂ ಬಂದು ತಪಾಸಣೆ ನಡೆಸಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡರು. ಆಗ ಸ್ಥಳದಲ್ಲೇ ಇದ್ದ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡ ಸಚಿವರು, ರೋಗಿಗಳು ಬಂದ ತಕ್ಷಣ ತಪಾಸಣೆ ನಡೆಸುವ ಸಾಮಾನ್ಯ ಜ್ಞಾನವೂ ಇಲ್ಲವೇ. ರೋಗಿಗಳಿಗೆ ಏನಾದರೂ ಸಮಸ್ಯೆಯಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಲ್ಲದೆ, ಸರಿಯಾಗಿ ಕೆಲಸ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದರು.
ಇನ್ನು ಸ್ವಚ್ಛತೆ ಬಗ್ಗೆ ಸಹ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಮೊದಲಿನಿಂದಲೂ ಸ್ವಚ್ಛತೆ ಇಲ್ಲ ಎಂದು ವೈದ್ಯರೊಬ್ಬರು ಸಬೂಬು ಹೇಳಲು ಮುಂದಾದರು. ಇದರಿಂದ ಮತ್ತಷ್ಟು ಕೆರಳಿದ ಸಚಿವರು, ಮೊದಲಿನ ಕತೆ ಬೇಡ. ನೀವು ಈಗ ವಾರ್ಡ್ ಸ್ವಚ್ಛವಾಗಿ ಇಟ್ಟುಕೊಳ್ಳಲು ಏನು ತೊಂದರೆ? ಇಡೀ ಆಸ್ಪತ್ರೆ ಸ್ವಚ್ಛವಾಗಿ ಇಟ್ಟುಕೊಳ್ಳುವುದಲ್ಲದೆ, ರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡುವ ಜವಾಬ್ದಾರಿ ಅರಿಯಿರಿ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಸೇರಿ ಎಲ್ಲ ಹಿರಿಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.