ಬಾಗಲಕೋಟೆ : ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಬೇಕೆನ್ನುವ ಪ್ರಯತ್ನ ಅನೇಕ ವರ್ಷಗಳಿಂದ ನಡೆಯುತ್ತಿದೆ. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲು ಸರ್ಕಾರಕ್ಕೆ ಅನುಮೋದನೆ ಸಲ್ಲಿಸಲಾಗಿದ್ದು, ಸಧ್ಯದಲ್ಲೇ ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದು ಬಿ.ವಿ.ವಿ.ಸಂಘ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಅವರ ಜನ್ಮದಿನದ ಪ್ರಯುಕ್ತ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಿವ್ಯಾಂಗರಿಗೆ ಕೃತಕ ಅಂಗಾಂಗಗಳ ವಿತರಣಾ ಕಾರ್ಯಕ್ರಮದಲ್ಲಿ ಅಂಗಾಂಗಳನ್ನು ವಿತರಿಸಿ ಮಾತನಾಡಿದರು.
ಬಿ.ವಿ.ವಿ ಸಂಘದ ‘ಸಮನ್ವಯ ಶಾಲೆ’ಯ ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಹತ್ತು ದಿವ್ಯಾಂಗರಿಗೆ ಕೃತಕ ಅಂಗಾಂಗಗಳನ್ನು ವಿತರಿಸಲಾಗಿದೆ, ದಿವ್ಯಾಂಗ ಮಕ್ಕಳಿಗಾಗಿ ಬಿ.ವಿ.ವಿ ಸಂಘದ “ಸಮನ್ವಯ ಶಾಲೆ” ಆರಂಭಿಸಲಾಗಿದೆ. ಸುಮಾರು ೫೪ ಮಕ್ಕಳು ಈ ಶಾಲೆಯಲ್ಲಿ ಓದುತ್ತಿರುವರು. ಮಕ್ಕಳಿಗೆ ಓದಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಹಾಗೂ ನ್ಯೂನ್ಯತೆಯಿಂದ ಹೊರಬರಲು ಅವರಿಗೆ ಫಿಜಿಯೋಥೆರಪಿ ಮತ್ತು ಇತರ ತರಬೇತಿಯನ್ನು ನೀಡಲಾಗುತ್ತಿದೆ. ವಿಶೇಷ ಚೇತನ ಮಕ್ಕಳಿಗಾಗಿ ಕುಮಾರೇಶ್ವರ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಕಡ್ಡಾಯ ಶ್ರವಣ ಶಕ್ತಿಯ ತಪಾಸಣೆ, ಕಣ್ಣಿನ ಪೊರೆ ಚಿಕಿತ್ಸೆ, ಕುಷ್ಠರೋಗ ಪರೀಕ್ಷೆ ಇತ್ಯಾದಿ ತಪಾಸಣೆಗಳನ್ನು ಮಾಡಲಾಗುತ್ತಿದೆ. ಶ್ರವಣ ದೋಷ ನಿವಾರಣೆಗಾಗಿ ೬ ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಉಚಿತವಾಗಿ ಸರ್ಕಾರದ ಆರೋಗ್ಯ ಯೋಜನೆಯಡಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಕೆ ಮಾಡಲಾಗುತ್ತಿದೆ. ಕುಮಾರೇಶ್ವರ ಆಸ್ಪತ್ರೆಯಲ್ಲಿ ೨೦೧೭ ರಲ್ಲಿ ಥಲಸ್ಸೇಮಿಯಾ ಮತ್ತು ಹಿಮೋಫಿಲಿಯಾ ಸೊಸೈಟಿಯನ್ನು ಸ್ಥಾಪಿಸಿ ಥಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರಸ್ತುತ ೫೦ ಮಕ್ಕಳು ಥಲಸ್ಸೇಮಿಯಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವರು.
ಈ ಕಾರ್ಯಕ್ಕಾಗಿ ಬೀಳೂರು ಶ್ರೀ ಗುರುಬಸವ ಪತ್ತಿನ ಸಹಕಾರ ಸಂಘದಿಂದ ಪ್ರತಿವರ್ಷ ೨೬ ಲಕ್ಷ ೩೧ ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರದಿಂದ ಮನ್ನಣೆ ಪಡೆದ ಕುಮಾರೇಶ್ವರ ಆಸ್ಪತ್ರೆಯ ಎ.ಆರ್.ಟಿ ಸೆಂಟರ್ ಮೂಲಕ ಎಚ್.ಐ.ವಿ ಪೀಡಿತ ಮಕ್ಕಳಿಗೆ ಔಷಧಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಮತ್ತು ತಜ್ಞವೈದ್ಯರಿಂದ ಆಪ್ತಸಮಾಲೋಚನೆ (ಕೌನ್ಸಿಲಿಂಗ್) ಮಾಡಲಾಗುತ್ತಿದೆ. ದಿವ್ಯಾಂಗರಿಗೆ ಅನುಕೂಲವಾಗಲೆಂದು ಕುಮಾರೇಶ್ವರ ಆಸ್ಪತ್ರೆಯಲ್ಲಿ ೨೦೧೩ ರಲ್ಲಿ ಕೃತಕ ಅಂಗಾಂಗಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ. ಇದುವರೆಗೂ ಸುಮಾರು ೨೫೦೦ ಕ್ಕಿಂತ ಹೆಚ್ಚು ದಿವ್ಯಾಂಗರು ಈ ಘಟಕದ ಪ್ರಯೋಜನ ಪಡೆದುಕೊಂಡಿರುವರು. ಈ ಮೊದಲು ಕೃತಕ ಅಂಗಾಂಗಗಳಿಗಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾಗಿದ್ದ ಸಮಸ್ಯೆ ಈ ಭಾಗದಲ್ಲಿ ನಿವಾರಣೆಯಾಗಿದೆ. ಒಟ್ಟಾರೆ ದಿವ್ಯಾಂಗರಿಗೆ ಅಗತ್ಯವಾದ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಚಿಕಿತ್ಸೆಯನ್ನು ಬಿ.ವಿ.ವಿ ಸಂಘದಿಂದ ಒದಗಿಸಲಾಗುತ್ತಿದೆ. ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಬೇಕೆನ್ನುವ ಪ್ರಯತ್ನ ಅನೇಕ ವರ್ಷಗಳಿಂದ ನಡೆಯುತ್ತಿದೆ. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲು ಸರ್ಕಾರಕ್ಕೆ ಅನುಮೋದನೆ ಸಲ್ಲಿಸಲಾಗಿದ್ದು ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ.
ಬಿ.ವಿ.ವಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಎಲ್ಲ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಡಾ.ವೀರಣ್ಣ ಚರಂತಿಮಠ ಅವರ ಸಾಧನೆಗಳು ನಿರಂತರವಾಗಿ ಮುಂದುವರೆಯಲೆಂದು ಹಾರೈಸಿ ದೇವರು ಅವರಿಗೆ ಆಯುರಾರೋಗ್ಯವನ್ನು ನೀಡಲೆಂದು ಜನ್ಮದಿನ ಪ್ರಯುಕ್ತ ಶುಭ ಕೋರಿgದರು.
ಕಾರ್ಯಕ್ರಮದಲ್ಲಿ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಶ್ರೀ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಶ್ರೀ ಅಶೋಕ ಎಮ್.ಸಜ್ಜನ (ಬೇವೂರ), ಬಿ.ವಿ.ವಿ ಸಂಘದ ಸದಸ್ಯರಾದ ಡಾ.ಮಹಾಂತೇಶ ಕಡಪಟ್ಟಿ, ಡಾ.ಸುಭಾಷ ಪಾಟೀಲ, ಅಶೋಕ ಕರಡಿ, ಅಶೋಕಕುಮಾರ ಕಲ್ಯಾಣಶೆಟ್ಟಿ, ಕುಮಾರ ಜಿಗಜಿನ್ನಿ, ಮಹೇಶ ಅಂಗಡಿ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.