ಜಿಲ್ಲೆ

ಜಿಲ್ಲಾ 19ನೇ ಅಕ್ಷರ ಜಾತ್ರೆಗೆ ಜನವಾಡಕರ್ ಸರ್ವಾಧ್ಯಕ್ಷ

Bidar

ಬೀದರ್: ಶೀಘ್ರ ನಡೆಯಲಿರುವ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿನ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಹಲವು ಸಾಹಿತಿಗಳು, ಕನ್ನಡ ಹೋರಾಟಗಾರರ, ಲೇಖಕರ ಹೆಸರು ಚರ್ಚೆಗೆ ಬಂದವು. ಅಂತಿಮವಾಗಿ ಜನವಾಡಕರ್ ಅವರ ಹೆಸರಿಗೆ ಮುದ್ರೆ ಬಿತ್ತು.

ಸಭೆಯಲ್ಲಿ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಾ.ಬಸವರಾಜ ಬಲ್ಲೂರ್, ಕೋಶಾಧ್ಯಕ್ಷ ಟಿ.ಎಂ.ಮಚ್ಚೆ, ಉಪಾಧ್ಯಕ್ಷರಾದ ಜಯದೇವಿ ಯದಲಾಪುರೆ, ವಿಜಯಕುಮಾರ ಗೌರೆ, ತಾಲೂಕಾಧ್ಯಕ್ಷ ಎಂ.ಎಸ್. ಮನೋಹರ, ಗಡಿ ಪ್ರತಿನಿಧಿ ಶಿವಕುಮಾರ ಕಟ್ಟೆ, ಪ್ರಮುಖರಾದ ಶಿವಶಂಕರ ಟೋಕರೆ, ಕಸ್ತೂರಿ ಪಟಪಳ್ಳಿ, ರಜಿಯಾ ಬಳಬಟ್ಟಿ, ಎಸ್.ವಿ. ಕಲ್ಮಠ, ಪಾಂಡುರಂಗ ಬೆಲ್ದಾರ್, ಡಾ.ರಾಜಕುಮಾರ ಅಲ್ಲೂರೆ, ಬಾಬುರಾವ ದಾನಿ, ಚನ್ನಬಸವ ಹೇಡೆ, ಯೋಗೀಶ ಮಠದ್, ಜಗನ್ನಾಥ ಕಮಲಾಪುರೆ, ವೀರಶೆಟ್ಟಿ ಚನ್ನಶೆಟ್ಟಿ, ಸಿದ್ಧಾರೂಢ ಭಾಲ್ಕೆ ಇದ್ದರು.

ಹಿರಿಯ ಸಾಹಿತಿ: ಎಸ್.ಎಂ.ಜನವಾಡಕರ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿ. ಎಂಎ, ಬಿಇಡಿ ಪದವಿ ಪಡೆದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಿಂದ ವೃತ್ತಿ ಜೀವನ ಆರಂಭಿಸಿ ಪ್ರೌಢ ಶಾಲಾ ಶಿಕ್ಷಕ, ಡಯಟ್ ಪ್ರಶಿಕ್ಷಕ, ಸಹಾಯಕ ಶಿಕ್ಷಣಾಧಿಕಾರಿ, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿ ನಂತರ ಸಾಹಿತ್ಯ, ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜನವಾಡಕರ್ ಅವರು ಕವನ ಸಂಕಲನ, ನಾಟಕ, ಕಾದಂಬರಿ, ಜಾನಪದ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಶೀಲ ತರಂಗ, ಪ್ರಜ್ಞಾ ತರಂಗ, ಕರುಣ ತರಂಗ, ಧಮ್ಮ ಚರಿತ ಕಾವ್ಯ, ತಥಾಗತ ಗಾಥೆಗಳ್, ಬಣ್ಣದ ಬದುಕು, ಹಸಿರು ಕ್ರಾಂತಿ, ಮಾಸಿದ ಹಾಸಿಗೆ, ಕಾದ ಕಂಬನಿ, ನಂಟು ಬಿಡದೆ ಅಂಟಿಕೊಂಡವರು, ಹಿಮಸಾಗರ, ಧರಿನಾಡಿನಿಂದ ಧಮ್ಮ ನಾಡಿಗೆ ಪ್ರವಾಸ ಕಥನ, ಗಾಜಿನ ಬಳೆಚೂರು, ಕರುಳಿನ ಕತ್ತರಿ, ಕವಲು ದಾರಿಯ ಪಯಣ, ಬೀದರ್ ಜನಪದ ಸಿರಿ, ಬೆಡಗಿನ ಬೀದರ್ ಮುಂತಾದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇವರ ಸೇವೆಗೆ ಹಲವು ಪ್ರಶಸ್ತಿ, ಗೌರವ ಬಂದಿವೆ. ಡಾ.ಅಂಬೇಡ್ಕರ್ ರಾಷ್ಟ್ರೀಯ ಸಾಹಿತ್ಯ ರತ್ನ ಪ್ರಶಸ್ತಿ, ಭಗವಾನ ಬುದ್ಧ ರಾಷ್ಟ್ರೀಯ ಫೆಲೊಶಿಪ್ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ.