ಕಲಬುರಗಿ: ಇಲ್ಲಿನ ಜಿಮ್ಸ್ ಸೇರಿ ರಾಜ್ಯದ ಆರು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಮುಂದಿನ ವರ್ಷ ಪಿಜಿ ಕೋರ್ಸ್ಗಳನ್ನು ಆರಂಭಿಸಲು ಪೂರಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಕರೊನಾ ಸ್ಥಿತಿಗತಿ ಅವಲೋಕಿಸಲು ಮತ್ತು ಭಾನುವಾರ ಅಧಿಕಾರಿಗಳ ಸಭೆ ನಡೆಸಲು ಶನಿವಾರ ರಾತ್ರಿ ನಗರಕ್ಕೆ ಆಗಮಿಸಿರುವ ಅವರು ವಿಜಯವಾಣಿ ಜತೆ ಮಾತನಾಡಿ, ಈಗಾಗಲೇ ಕಲಬುರಗಿಗೆ ಎಂಸಿಐ ಅಫಿಲೇಷನ್ ಸಿಕ್ಕಿದೆ. ಉಳಿದ ಕಡೆಗೂ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. 85ಕ್ಕೂ ಹೆಚ್ಚಿನ ಪಿಜಿ ಸೀಟು ಸಿಗಬಹುದು. ಮೆಡಿಕಲ್ ಸೀಟುಗಳನ್ನು ಸಹ ಹೆಚ್ಚಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಪ್ರಕ್ರಿಯೆ ಕೊಂಚ ವಿಳಂಬವಾಗಬಹುದು ಎಂದರು.
ಕರೊನಾ ಸೋಂಕಿತರ ಸಂಖ್ಯೆ ಜುಲೈ ಮತ್ತು ಆಗಸ್ಟ್ನಲ್ಲಿ ಹೆಚ್ಚಲಿದೆ ಎಂದು ತಜ್ಞರು ವರದಿ ನೀಡಿದ್ದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚಿಕಿತ್ಸೆ ನೀಡಲು ಔಷಧ, ವೆಂಟಿಲೇಟರ್ ಮತ್ತು ಬೆಡ್ಗಳನ್ನು ಸಿದ್ಧಪಡಿಸಲಾಗಿದೆ ಎಂದ ಅವರು, ಕರೊನಾ ಹೆಚ್ಚಾಗಲಿದೆ. ಮತ್ತೆ ಲಾಕ್ಡೌನ್ ಮಾಡಲಾಗುತ್ತದೆ ಎಂಬ ಊಹಾಪೋಹಗಳನ್ನು ಅಲ್ಲಗೆಳೆದರು.
ಮತ್ತೆ ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಈಗ ಮತ್ತೊಮ್ಮೆ ಲಾಕ್ಡೌನ್ ಅಥವಾ ಸೀಲ್ಡೌನ್ ಮಾಡಿದರೆ ನಮ್ಮನ್ನು ಲಾಕ್ ಮಾಡುತ್ತಾರೆ ಎಂದು ಚಟಾಕಿ ಹಾರಿಸಿದರು. ಈಗಿನ ಸ್ಥಿತಿಯಲ್ಲಿ ಜೀವ ಮತ್ತು ಜೀವನ ಎರಡನ್ನೂ ಜತೆಜತೆಗೆ ಕೊಂಡೊಯ್ಯುವುದು ಸಕರ್ಾರದ ಹೊಣೆಯಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡುತ್ತಿದ್ದೇವೆ ಎಂದರು.
ಜಿಪಂ ಸಿಇಒ ಡಾ.ಪಿ.ರಾಜಾ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್ ಮತ್ತು ಜಿಲ್ಲೆ ಶಾಸಕರೊಂದಿಗೆ ಅನೌಪಚಾರಿಕವಾಗಿ ಸಚಿವ ಸುಧಾಕರ್ ಚರ್ಚೆ ನಡೆಸಿದರು. ಶಾಸಕರಾದ ಡಾ.ಅವಿನಾಶ ಜಾಧವ್, ಬಸವರಾಜ ಮತ್ತಿಮೂಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಜಿಮ್ಸ್ ಆಡಳಿತ ಮಂಡಳಿ ನಿರ್ದೇಶಕ ಪ್ರಹ್ಲಾದ್ ಭಟ್ ಪೂಜಾರಿ, ಲಿಂಗರಾಜ ಬಿರಾದಾರ ಇತರರಿದ್ದರು.
ಕರೊನಾ ಪರೀಕ್ಷೆ ವಿಳಂಬಗೊಳ್ಳುತ್ತಿಲ್ಲ, 24 ಗಂಟೆಯಲ್ಲೇ ತಪಾಸಣಾ ವರದಿ ನೀಡಲಾಗುತ್ತಿದೆ. ಪ್ರಯೋಗಾಲಯಗಳಲ್ಲಿ ಪರೀಕ್ಷಾ ಸಾಮಥ್ರ್ಯ ಹೆಚ್ಚಿಸಲಾಗಿದೆ. ಕಲಬುರಗಿ ಲ್ಯಾಬ್ನಲ್ಲಿ 800-850 ಮಾದರಿಗಳನ್ನು ಪ್ರತಿದಿನ ತಪಾಸಣೆ ಮಾಡಲಾಗುತ್ತಿದೆ. ವರದಿಗಳು ಬಾಕಿ ಉಳಿಕೆ ಪ್ರಮಾಣ ತೀರ ಕಡಿಮೆ.
| ಡಾ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ