filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.618016, 0.5266786);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38; 
ಜಿಲ್ಲೆ

ಜಿಪಿಎಸ್, ಪ್ಯಾನಿಕ್ ಬಟನ್‌ಗೆ ವಿರೋಧ

Chitradurga - Desk - Pranav Kumar

ಚಿತ್ರದುರ್ಗ: ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ಖಾಸಗಿ ಪ್ರವಾಸಿ ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಖಾಸಗಿ ವಾಹನಗಳ ನೂರಾರು ಮಾಲೀಕರು, ಚಾಲಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ, ಆದೇಶದ ವಿರುದ್ಧ ಧಿಕ್ಕಾರ ಕೂಗಿದರು. ಈ ಅವೈಜ್ಞಾನಿಕ ನಿರ್ಧಾರ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸಲು ರಾಜ್ಯದ ಎಲ್ಲ ಸಾರಿಗೆ ಕಚೇರಿಗಳಲ್ಲಿ 13 ಸಾವಿರದಿಂದ 15 ಸಾವಿರ ರೂ. ಶುಲ್ಕ ಪಡೆಯುತ್ತಿದ್ದು, ಖಾಸಗಿ ಪ್ರವಾಸಿ ವಾಹನಗಳ ಚಾಲಕರು ಮತ್ತು ಮಾಲೀಕರಿಗೆ ಹೊರೆಯಾಗಿದೆ ಎಂದು ಅಳಲು ತೋಡಿಕೊಂಡರು.

2024ರ ಸೆಪ್ಟೆಂಬರ್‌ವರೆಗೆ ಯಾವುದೇ ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸದೆ, ಎಫ್‌ಸಿ ಮಾಡಿಕೊಡುವಂತೆ ಸಾರಿಗೆ ಸಚಿವರು ಆದೇಶಿಸಿದ್ದರೂ ಇಲಾಖೆ ಅಧಿಕಾರಿಗಳು ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯದೆಲ್ಲ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರು-ಮಾಲೀಕರು ಹೈರಾಣಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಈ ಆದೇಶ ಹಿಂಪಡೆದು ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.

ಖಾಸಗಿ ಬಸ್, ಲೈಸ್ ಸರ್ವಿಸ್ ಬಸ್ ಮಾಲೀಕರ, ಮಿನಿ ಲಾರಿ, ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ, ಲಘು ವಾಹನ ಮಾಲೀಕರ ಸಂಘಗಳ ಪದಾಧಿಕಾರಿಗಳು ಪ್ರತಿಭಟನೆಗೆ ಕೈಜೋಡಿಸಿದರು.

ಸಂಘದ ರಾಜ್ಯ ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ.ರೋಡ್, ಪ್ರಧಾನ ಕಾರ್ಯದರ್ಶಿ ಆರೀಫ್ ಉಜಿರೆ, ಶರತ್‌ಕುಮಾರ್, ದಿನೇಶ್, ನರಹರಿ ಇತರರಿದ್ದರು.