ಬಾಗಲಕೋಟೆ : ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಅವರನ್ನ ಸರ್ಕಾರ ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.
ಕುರೇರ ಅವರ ಸ್ಥಾನಕ್ಕೆ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಾ. ಆಕಾಶ ಎಸ್ ಅವರನ್ನು ಬಾಗಲಕೋಟೆ ಜಿಪಂ ಸಿಇಒ ಆಗಿ ವರ್ಗಾವಣೆ ಮಾಡಲಾಗಿದೆ.
ಡಾ. ಆಕಾಶ ಅವರು 2019 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಎರಡು ವರ್ಷದ ಹಿಂದೆ ಬಾಗಲಕೋಟೆ ಜಿಪಂ ಸಿಇಒ ಎಂದು ಸರ್ಕಾರ ಇವರನ್ನು ವರ್ಗಾವಣೆ ಮಾಡಿತ್ತು. ಬಳಿಕ ಅವರು ಇಲ್ಲಿಗೆ ಬರುವ ಮುಂಚೆಯೇ ಸರ್ಕಾರ ವರ್ಗಾವಣೆ ಕ್ಯಾನ್ಸಲ್ ಮಾಡಿತ್ತು.
ಸದ್ಯ ಸಿಇಒ ಆಗಿ ಎರಡು ವರ್ಷ ಸೇವೆ ಸಲ್ಲಿಸಿರುವ ಶಶಿಧರ ಕುರೇರ ಅವರು ಉತ್ತಮಸೇವೆಯ ಮೂಲಕ ಗುರುತಿಸಿಕೊಂಡಿದ್ದರು. ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿ ಇದ್ದರು. ನರೇಗಾ ಯೋಜನೆಯಲ್ಲೂ ಜಿಲ್ಲೆ ಉತ್ತಮ ಸಾಧನೆ ಮಾಡಿತ್ತು. ಗ್ರಾಮ ಪಂಚಾಯಿತಿಗಳ ಅಧಾಯ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆ ಪರಿಷ್ಕರಣೆ ಮಾಡಿದ್ದಲ್ಲದೇ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಮನೆ ಮನೆಗೆ ತೆರಳಿ ಕರ ಸಂಗ್ರಹ ಮಾಡುವ ವಿಶೇಷ ಅಭಿಯಾನ ಆರಂಭಿಸಿ ಗಮನ ಸೆಳೆದಿದ್ದಲ್ಲೇ ಪಂಚಾಯಿತಿಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವ ಅವರ ಪ್ರಯತ್ನ ಯಶಸ್ವಿ ಆಗಿತ್ತು. ಇನ್ನು ಒಂದು ವರ್ಷ ಕುರೇರ ಅವರು ಸಿಇಒ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎನ್ನುವ ಮಾತುಗಳು ಇದ್ದವು. ಆದರೆ, ಮಂಗಳವಾರ ಸರ್ಕಾರ ದಿಢೀರನೇ ಬಾಗಲಕೋಟೆ ಜಿಪಂ ಸಿಇಒ ಸ್ಥಾನದಿಂದ ಬೆಂಗಳೂರಿನ ಕೆಯುಐಡಿಎಫ್ ಸಿ ಗೆ ಜಂಟಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಿದೆ.