ಚಿತ್ರದುರ್ಗ: ಕಾರ‌್ಯಕರ್ತರ ಚುನಾವಣೆಗಳೆಂದು ಕರೆಸಿಕೊಳ್ಳುವ ತಾಪಂ, ಜಿಪಂ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಸಂಸದ ಗೋವಿಂದ ಎಂ.ಕಾರಜೋಳ ಅವರು ಬಿಜೆಪಿ-ಜೆಡಿಎಸ್ ಕಾರ‌್ಯಕರ್ತರಿಗೆ ಮನವಿ ಮಾಡಿದರು.
ಮಾಜಿ ಶಾಸಕ ಎಸ್‌ಕೆಬಿ ಅಭಿಮಾನಿ ಬಳಗ ನಗರದ ವೈಭವ್ ಕನ್ವೇನ್‌ಷನ್ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮೂರು ತಿಂಗಳ ಒಳಗೆ ಎದುರಾಗಲಿರುವ ತಾಪಂ, ಜಿಪಂ ಚುನಾವಣೆಗಳಿಗೆ ಕಾರ‌್ಯಕರ್ತರು ಸಜ್ಜಾಗಬೇಕೆಂದರು.
ಗ್ಯಾರಂಟಿಗಳ ಭಾರದಿಂದ ಬಳಲುತ್ತಿರುವ ರಾಜ್ಯ ಸರ್ಕಾರದ ಆಯುಸ್ಸು ಅಲ್ಪವಾಗಿದೆ. ಈ ಸರ್ಕಾರವನ್ನು ಬೀಳಿಸಲು ಪ್ರತಿಪಕ್ಷಗಳು ಏನೂ ಮಾಡಬೇಕಾಗಿಲ್ಲ. ಹಾಲು ಕುಡಿದರೆ ಸಾಯುವಂಥವರಿಗೆ ವಿಷ ಯಾಕೆ? ಗ್ಯಾರಂಟಿಗಳ ವಿರುದ್ಧ 70 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬಂಡೆದ್ದಿದ್ದಾರೆ. ಅಹಿಂದ ಹೆಸರಲ್ಲಿ ಅಧಿಕಾರ ಹಿಡಿದಿರುವ ಸಿದ್ದರಾಮಯ್ಯ ಜನರಿಗೆ ಮೋಸ ಮಾಡಿದ್ದಾರೆ. ಮೋಸ, ಸುಳ್ಳಿನಿಂದ ಬಹಳ ದಿನ ಆಡಳಿತ ನಡೆಸಲಾಗದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ, ಜಾತಿ, ಧರ್ಮ ಭೇದ ಮಾಡದೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಎಸ್ಸಿ, ಎಸ್ಟಿ ಸಮುದಾಯದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದೆ. ಆದರೂ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ಬಡವರಪರವೆಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರು ಮಾತನಾಡಿ, ಜನರು ಹಣವನ್ನು ನೋಡದೆ ವ್ಯಕ್ತಿ, ಕೇಂದ್ರ ಸಾಧನೆಗಳನ್ನು ನೋಡಿ ಕಾರಜೋಳ ಅವರನ್ನು ಗೆಲ್ಲಿಸಿದ್ದಾರೆ. ದೂರದವರು ಗೆದ್ದರೆ ಕೈಗೆ ಸಿಗುವುದಿಲ್ಲ ಎಂದು ಚುನಾವಣೆ ಮುನ್ನ ಮಾತನಾಡುತ್ತಿದ್ದರು. ಆದರೆ ಈಗ ಸ್ಥಳೀಯ ಶಾಸಕರ ಜನರಿಗೆ ಸಿಗುತ್ತಾರೊ ಇಲ್ಲವೋ, ಕಾರಜೋಳ ಅವರು ಜನ ಸಾಮಾನ್ಯರಿಗೆ ಸ್ಪಂದಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ, ರೈಲ್ವೆ, ಪ್ರವಾಸೋದ್ಯಮ, ಕೇಂದ್ರೀಯ ವಿದ್ಯಾಲಯ ಮೊದಲಾದ ವಿಚಾರಗಳನ್ನು ಈಗಾಗಲೇ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜಿ.ಎಂ.ಸುರೇಶ್, ಸುರೇಶ್ ಸಿದ್ದಾಪುರ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮಾಜಿ ಸದಸ್ಯರಾದ ಲಕ್ಷ್ಮಣ್, ಓಬಳೇಶ್, ರೇವಣ್ಣ, ಗುರುಸ್ವಾಮಿ, ಡಿ.ಒ.ಮುರಾರ್ಜಿ, ನಗರಸಭೆ ಸದ್ಯಸರಾದ ಶಶಿಧರ್, ಸುರೇಶ್, ಜಯಣ್ಣ, ಕುಡಾ ಮಾಜಿ ಅಧ್ಯಕ್ಷ ಬದ್ರಿನಾಥ್, ಭಾರ್ಗವಿ ದ್ರಾವಿಡ ಮತ್ತಿತರ ಬಿಜೆಪಿ-ಜೆಡಿಎಸ್ ಮುಖಂಡರು ಇದ್ದರು.