ಜಿಲ್ಲೆ

ಜಿಪಂ, ತಾಪಂ ಅಖಾಡಕ್ಕೆ ಕಳೆ

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಕಾಲ ಕೂಡಿ ಬರುತ್ತಿರುವುದು ರಾಜಕೀಯ ಅಖಾಡವನ್ನು ಕಳೆಗಟ್ಟಿಸಲಿದೆ.

ಜಿ.ಪಂ ಮತ್ತು ತಾ.ಪಂ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೌಖಿಕವಾಗಿ ಮುಚ್ಚಳಿಕೆ ಕೊಟ್ಟಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಲೋಕಲ್ ರಾಜಕೀಯದಲ್ಲಿ ಬಹುದಿನಗಳ ನಿರೀಕ್ಷೆಗೆ ಬಲ ಬಂದಂತಾಗಿದೆ. 2016ರಲ್ಲಿ ಜಿ.ಪಂ ಮತ್ತು ತಾ.ಪಂ ಎಲೆಕ್ಷನ್ ನಡೆದಿತ್ತು. ಚುನಾವಣೆಯಲ್ಲಿ ಗೆದ್ದವರ ಅಧಿಕಾರವಧಿ 2021ರಲ್ಲಿ ಮುಕ್ತಾಯಗೊಂಡಿತು. ಅಲ್ಲಿಂದ ಈವರೆಗೂ ಮತ್ತೆ ಚುನಾವಣೆಯೇ ನಡೆಯಲಿಲ್ಲ.

ಇದೀಗ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ನೀಡಿರುವ ಮಾಹಿತಿಯು ರಾಜಕೀಯ ಚಟುವಟಿಕೆಯನ್ನು ಗರಿಗೆದರುವಂತೆ ಮಾಡಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಪಂ ಮತ್ತು ತಾಪಂ ಚುನಾವಣೆ ಮುಂಬರುವ ಜೂನ್ ಅಥವಾ ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಬಳಿಕ ಜಿ.ಪಂ ಮತ್ತು ತಾ.ಪಂ ಎಲೆಕ್ಷನ್‌ಗಳನ್ನು ಎದುರು ನೀಡಲಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತವೆ.

ಒಟ್ಟು 28 ಕ್ಷೇತ್ರಗಳು: ಚಾಮರಾಜನಗರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಏರಿಕೆಯಾಗಿದೆ. ಈ ಹಿಂದೆ ಒಟ್ಟು 23 ಕ್ಷೇತ್ರಗಳು ಇದ್ದವು. ಆದರೆ ಈಗ ಇದರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರ ರಚನೆ ಮಾಡಿದ್ದ ಸೀಮಾ ನಿರ್ಣಯ ಆಯೋಗವು ಕ್ಷೇತ್ರಗಳ ಪುನರ್‌ವಿಂಗಣೆ ಮಾಡಿದ ವೇಳೆ ಕ್ಷೇತ್ರಗಳ ಸಂಖ್ಯೆ ಏರಿಕೆಯಾಗಿದೆ. ತಾಲೂಕು ಪಂಚಾಯಿತಿ ಕ್ಷೇತ್ರಗಳು ಈ ಹಿಂದೆ 89 ಇದ್ದವು. ಆದರೆ ಈಗ ಇದರ ಸಂಖ್ಯೆ 83ಕ್ಕೆ ಇಳಿಕೆ ಕಂಡಿದೆ.

ಪ್ರತಿಷ್ಠೆಯ ಚುನಾವಣೆ: ಜಿ.ಪಂ ಮತ್ತು ತಾ.ಪಂ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರ ಹಿಡಿದರೆ ಮಾತ್ರ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಗೆಲುವು ಸಾಧಿಸಲು ಸುಲಭವಾಗುತ್ತದೆ. ಹೀಗಾಗಿ ಲೋಕಲ್ ೈಟ್ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ. ಜಿ.ಪಂ ಮತ್ತು ತಾ.ಪಂ ಚುನಾವಣೆಗಳನ್ನು ರಾಜಕೀಯ ಪಕ್ಷಗಳು ಕಾಯುತ್ತಿರುವುದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ. ಈ ಚುನಾವಣೆಗಳು ಯುವ ನಾಯಕರು ಮತ್ತು ಎರಡನೇ ಹಂತದಲ್ಲಿರುವ ಮುಖಂಡರಿಗೆ ಪ್ರಧಾನ ವೇದಿಕೆಯಾಗಿದೆ. ತಮಗೆ ಸೂಕ್ತ ಎನಿಸುವ ಕ್ಷೇತ್ರಗಳತ್ತ ಈಗಾಗಲೇ ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಮಾಡಿಟ್ಟುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಆ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಹೊಂದುವುದು, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಕಾರ್ಯ ನಡೆದಿದೆ. ಕೆಲವರಂತೂ ಜಿ.ಪಂ ಮತ್ತು ತಾ.ಪಂ ಚುನಾವಣೆಗಳ ಮುಂದಾಲೋಚನೆಯಲ್ಲೇ ರಾಜಕೀಯ ಮಾಡುತ್ತಿದ್ದಾರೆ. ತಮಗೆ ಸೂಕ್ತ ಎನಿಸುವ ಕ್ಷೇತ್ರದಲ್ಲಿ ಜಾತಿ ಸಮೀಕರಣ ಹೇಗಿದೆ, ಪಕ್ಷಕ್ಕೆ ಬರುವ ಮತಗಳು ಎಷ್ಟು ಎನ್ನುವುದನ್ನೂ ಲೆಕ್ಕಾಚಾರ ಮಾಡಿಕೊಂಡು ಎಲೆಕ್ಷನ್‌ಗಾಗಿ ಕಾಯಲಾಗುತ್ತಿದೆ. ಬೇರೆಯವರು ಯಾವ ಕ್ಷೇತ್ರಗಳತ್ತ ಕಣ್ಣಿಟ್ಟಿದ್ದಾರೆ. ತಮ್ಮ ಆಯ್ಕೆಯ ಕ್ಷೇತ್ರಗಳ ಮೇಲೆ ಅವರ ಚಿತ್ತವಿದೆಯೇ?, ಮೀಸಲು ಪ್ರಕಟಗೊಂಡ ಬಳಿಕ ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು, ದೊಡ್ಡ ದೊಡ್ಡ ನಾಯಕರ ಮೂಲಕ ಲಾಬಿ ಮಾಡಿ ಪಕ್ಷದ ಟಿಕೆಟ್ ಪಡೆಯಬಹುದು ಎನ್ನುವುದೂ ಒಳಗೊಳಗೆ ನಡೆಯುತ್ತಿದೆ.

ಲೋಕಲ್ ೈಟ್‌ನಲ್ಲಿ...

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ರಾಜಕೀಯ ಪಕ್ಷಗಳ ಪಾಲಿಗೆ ಗಂಭೀರ ವಿಚಾರ. ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ, ಜೆಡಿಎಸ್ ಮತ್ತು ಇತರೆ ಪಕ್ಷಗಳು ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ಬೀಳುತ್ತಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಗೆದ್ದು ಗಮನ ಸೆಳೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-3, ಜೆಡಿಎಸ್-1 ಸ್ಥಾನ ಜಯಗಳಿಸಿತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ವಿಜಯ ಸಾಧಿಸಿತು. ಲೋಕಲ್ ೈಟ್ ಆಗಿರುವ ಜಿ.ಪಂ ಮತ್ತು ತಾ.ಪಂ ಚುನಾವಣೆಗಳಲ್ಲಿ ಯಾವ ಪಕ್ಷಗಳು ಕಮಾಲ್ ಮಾಡುತ್ತದೆಯೋ ಅದು ಮುಂದಿನ ಚುನಾವಣೆಗಳ ಲಿತಾಂಶದ ಮೇಲೂ ಪ್ರಭಾವ ಬೀರಲಿದೆ.