ಗದಗ: ಕೊಣ್ಣೂರು ಜಿಪಂ ಕ್ಷೇತ್ರದ ಸದಸ್ಯ ರಾಜೂಗೌಡ ಕೆಂಚನಗೌಡ ಅವರು ಜಿಪಂ ನೂತನ ಅಧ್ಯಕ್ಷರಾಗಿ ಶುಕ್ರವಾರ ಅವಿರೋಧ ಆಯ್ಕೆಯಾದರು.
ಜಿಪಂ ಅಧ್ಯಕ್ಷರಾಗಿದ್ದ ಸಿದ್ಧಲಿಂಗೇಶ್ವರ ಪಾಟೀಲ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜೂ.19 ರಂದು ಚುನಾವಣೆ ನಿಗದಿ ಮಾಡಲಾಗಿತ್ತು. ರಾಜೂಗೌಡ ಕೆಂಚನಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಚುನಾವಣಾಧಿಕಾರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರು ರಾಜೂಗೌಡ ಕೆಂಚನಗೌಡ ಅವರನ್ನು ಜಿಪಂ ಅಧ್ಯಕ್ಷ ಎಂದು ಅಧಿಕೃತ ಘೊಷಣೆ ಮಾಡಿದರು. ಪ್ರಭಾರಿಯಾಗಿದ್ದ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ ಅವರು ರಾಜೂಗೌಡ ಕೆಂಚನಗೌಡ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಜಿಪಂ ಸಿಇಒ ಡಾ.ಆನಂದ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ವಾಸಣ್ಣ ಕುರಡಗಿ, ಎಸ್.ಪಿ. ಬಳಿಗಾರ ಇತರರಿದ್ದರು.
ಜಿಪಂ ಅಧ್ಯಕ್ಷ ಸ್ಥಾನದ ಐದು ವರ್ಷ ಅವಧಿಯಲ್ಲಿ ನಾಲ್ಕು ವರ್ಷ ಒಂದು ತಿಂಗಳು ಅವಧಿ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಮೂವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಉಳಿದ ಅವಧಿಗಾಗಿ ರಾಜೂಗೌಡ ಕೆಂಚನಗೌಡ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 2016ರ ಫೆಬ್ರವರಿಯಲ್ಲಿ ಜರುಗಿದ ಜಿಪಂ ಚುನಾವಣೆಯಲ್ಲಿ ಜಿಪಂ 19 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿ ಮೇಲುಗೈ ಸಾಧಿಸಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಪುರುಷ ಮತ್ತು ಉಪಾಧ್ಯಕ್ಷ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದೆ.
ಪಕ್ಷದ ಮುಖಂಡರು ನನಗೆ ಹಿರಿದಾದ ಜವಾಬ್ದಾರಿ ನೀಡಿದ್ದು, ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಮುಖ್ಯವಾಗಿ ಕರೊನಾ ವೈರಸ್ ಹಾವಳಿಯಿಂದ ಬಡವರು, ಕೂಲಿಕಾರ್ವಿುಕರು ತೊಂದರೆಗೀಡಾಗಿದ್ದು, ಅವರ ಜೀವನ ಸಂಕಷ್ಟಕ್ಕ ಸಿಲುಕಿದೆ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹರಿಗೆ ಕೆಲಸ ನೀಡುವುದು ನನ್ನ ಪ್ರಥಮ ಆದ್ಯತೆಯಾಗಿದೆ.| ರಾಜೂಗೌಡ ಕೆಂಚನಗೌಡ, ಜಿಪಂ ನೂತನ ಅಧ್ಯಕ್ಷ