ಜಿಲ್ಲೆ

ಜಿನ್​ಸರ್ವ್-ಕೆಎಲ್​ಇ ಸಿಟೈ ಒಪ್ಪಂದ, ಮಹಿಳಾ ಸ್ಟಾರ್ಟಪ್​ಗಳಿಗೆ ಉತ್ತೇಜನ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಭಾಗದ ಮಹಿಳಾ ಸ್ಟಾರ್ಟಪ್​ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬೆಂಗಳೂರು ಮೂಲದ ಜಿನ್​ಸರ್ವ್ ಗ್ಲೋಬಲ್ ಇನ್​ಕ್ಯುಬೇಶನ್ ಸರ್ವಿಸಸ್ ಹಾಗೂ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿಟೈ (ಸಿಟಿಐಇ-ಸೆಂಟರ್ ಆಫ್ ಟೆಕ್ನಾಲಜಿ ಇನ್ನೊವೇಶನ್ ಆಂಡ್ ಎಂಟರ್​ಪ್ರ್ಯುನರ್​ಶಿಪ್) ಒಪ್ಪಂದ ಮಾಡಿಕೊಂಡಿದೆ.

ಹುಬ್ಬಳ್ಳಿಯ ಕೆಎಲ್​ಇ ಎಸ್​ಎಂಎಸ್​ಆರ್​ನಲ್ಲಿ ಶುಕ್ರವಾರ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಿನ್​ಸರ್ವ್​ನ ಸಿಒಒ ಗಿರೀಶ ಹಿರೇಮಠ ಹಾಗೂ ಕೆಎಲ್​ಇ ತಾಂತ್ರಿಕ ವಿವಿ ರಜಿಸ್ಟ್ರಾರ್ ಡಾ. ಬಸವರಾಜ ಅನಾಮಿ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಜೈವಿಕ ತಂತ್ರಜ್ಞಾನ, ಆರೋಗ್ಯ ಸೇವೆ, ಶಿಕ್ಷಣ, ಇ-ಕಾಮರ್ಸ್ ಹಾಗೂ ಆಹಾರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 16 ಮಹಿಳಾ ತಾಂತ್ರಿಕ ಸ್ಟಾರ್ಟಪ್​ಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಿಗೆ 2022ರ ಅಕ್ಟೋಬರ್​ನಿಂದ 2023ರ ಮಾರ್ಚ್ ವರೆಗೆ ರಚನಾತ್ಮಕ ಇನ್​ಕ್ಯುಬೇಶನ್ ಪ್ರೋಗ್ರಾಮ್ ನಡೆಸಲಾಗುವುದು. ಇದರಡಿ 200 ಗಂಟೆಗಳ ಕಾಲ ತಾಂತ್ರಿಕ ಮಾರ್ಗದರ್ಶನ ನೀಡಲಾಗುವುಗು. ಆನ್​ಲೈನ್​ನಲ್ಲಿ ಉದ್ಯಮ ಕ್ಷೇತ್ರದ ಪರಿಣತರಿಂದ ಸಲಹೆ ಪಡೆಯಬಹುದಾಗಿದೆ ಎಂದು ಜಿನ್​ಸರ್ವ್​ನ ಸಿಒಒ ಗಿರೀಶ ಹಿರೇಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2020ರಲ್ಲಿ ಆರಂಭಗೊಂಡ ಜಿನ್​ಸರ್ವ್ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮಾನ್ಯತೆ ಹೊಂದಿದೆ. ಕಳೆದ 12 ವರ್ಷಗಳಲ್ಲಿ ಸುಮಾರು 200 ತಾಂತ್ರಿಕ ಸ್ಟಾರ್ಟಪ್​ಗಳಿಗೆ ಉತ್ತೇಜನ ನೀಡುವ ಕೆಲಸ ಮಾಡಿದ್ದೇವೆ. ಇವು 5 ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದು, ಸಾವಿರ ಕೋಟಿ ಬಂಡವಾಳವನ್ನು ತೊಡಗಿಸಿವೆ. ಇದನ್ನು ನೋಡಿ ರಾಜ್ಯ ಸರ್ಕಾರ ಸ್ಟಾರ್ಟಪ್ ಕರ್ನಾಟಕ ಬ್ಯಾನರ್ ನಡಿ ಮಹಿಳಾ ತಾಂತ್ರಿಕ ಸ್ಟಾರ್ಟಪ್​ಗಳಿಗೆ ಉತ್ತೇಜನ ನೀಡುವ ಜವಾಬ್ದಾರಿಯನ್ನು ವಹಿಸಿದೆ. ಯೋಚನಾ ಮಟ್ಟದಲ್ಲಿರುವ ಸ್ಟಾರ್ಟಪ್​ಗಳನ್ನು ಯಶಸ್ವಿ ಉದ್ಯಮವನ್ನಾಗಿ ಪರಿವರ್ತಿಸಲು ಬೇಕಾಗುವ ಮಾರ್ಗದರ್ಶನ ಮಾಡಬೇಕಿದೆ ಎಂದರು.

ಕೆಎಲ್​ಇ ಸಿಟೈ ನಿರ್ದೇಶಕ ಶಿವಯೋಗಿ ತುರಮುರಿ ಮಾತನಾಡಿ, ನಮ್ಮಲ್ಲಿ ಉತ್ಕೃಷ್ಟ ಪ್ರಯೋಗಾಲಯಗಳು, ಸಾಫ್ಟವೇರ್, ಅಧ್ಯಾಪಕ ವೃಂದ, ಮೂಲಸೌಕರ್ಯಗಳಿವೆ. ಯಾವುದೇ ವಿಧವಾದ ತಾಂತ್ರಿಕ ನೆರವನ್ನು ಬಳಸಿಕೊಳ್ಳಲು ಅವರಿಗೆ (ಜಿನ್​ಸರ್ವ್) ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.