ಜಿಲ್ಲೆ

ಜಿಟಿಡಿ ಮತ್ತೆ ಮುಂಚೂಣಿಗೆ, ಸೋತು ಗೆದ್ದ ಜೆಡಿಎಸ್

ಮಂಜುನಾಥ ಟಿ.ಭೋವಿ ಮೈಸೂರು


ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಬಲವಾಗಿರುವ ಜೆಡಿಎಸ್ ಜತೆ ಶಾಸಕ ಜಿ.ಟಿ.ದೇವೇಗೌಡ ಮುನಿಸು ತೊರೆದಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಆ ಪಕ್ಷದ ನಾಯಕತ್ವದ ಆಟ ಉಲ್ಟಾಪಲ್ಟಾ ಆಗಿದೆ. ತೆರೆಮರೆಗೆ ಸರಿದಿದ್ದ ಜಿಟಿಡಿ ಮತ್ತೆ ಮುಂಚೂಣಿಗೆ ಬಂದರೆ, ಮೊದಲ ಸಾಲಿನಲ್ಲಿದ್ದ ಶಾಸಕ ಸಾ.ರಾ.ಮಹೇಶ್ ಒಂದು ಹೆಜ್ಜೆ ಹಿಂದಕ್ಕೆ ತಳ್ಳಲ್ಪಟ್ಟಿದ್ದಾರೆ.
ಹಾವು-ಮುಂಗೂಸಿಯಂತೆ ಬುಸುಗುಡುತ್ತಿದ್ದ ಈ ಇಬ್ಬರೂ ನಾಯಕರು ಇದೀಗ ಜೋಡೆತ್ತುಗಳಂತೆ ಒಂದೇ ನೊಗ ಹೊತ್ತು ಸಾಗಬೇಕಿದೆ. ಈ ಮೂಲಕ ‘ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುವೂ ಅಲ್ಲ’ ಎಂಬ ಗಾದೆ ಇಲ್ಲಿ ನಿಜವಾಗಿದೆ.

ಹಾವು-ಏಣಿ ಆಟಕ್ಕೂ ತೆರೆ:
ಕಳೆದ ಮೂರು ವರ್ಷಗಳಿಂದ ಮುನಿಸಿಕೊಂಡು, ಜೆಡಿಎಸ್ ಚಟುವಟಿಕೆಗಳಿಂದ ದೂರವಿದ್ದ ಜಿ.ಟಿ.ದೇವೇಗೌಡ ಅವರ ಮರು ಆಗಮನ ನಾಟಕೀಯ ಬೆಳವಣಿಗೆಯೊಂದಿಗೆ ಆಗಿದೆ. ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಜಿಟಿಡಿ ಮನೆಗೆ ಭೇಟಿ ನೀಡಿ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಧಾನ ಫಲಪ್ರದವಾದ ಬಳಿಕ ಜಿಟಿಡಿ, ‘ನಾನು ಜೆಡಿಎಸ್‌ನಲ್ಲೇ ಉಳಿಯುತ್ತೇನೆ’ ಎಂದು ಘೋಷಿಸಿದ್ದಾರೆ.
ಗೊಂದಲ, ನಾಯಕತ್ವ ಕೊರತೆಯಿಂದ ನಲುಗಿದ್ದ ಜೆಡಿಎಸ್ ಪಾಳಯದಲ್ಲಿ ಈ ಕ್ಷಿಪ್ರ ಮನಪರಿವರ್ತನೆಯ ಬೆಳವಣಿಗೆ ಸಂಭ್ರಮಕ್ಕೂ ನಾಂದಿ ಹಾಡಿದೆ. ಇದು ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಯಾವ ಪಕ್ಷದ ಕಡೆಗೆ ಹೋಗುತ್ತಾರೆ ಎಂಬ ಜಿಟಿಡಿಯ ಹಾವು-ಏಣಿ ಆಟಕ್ಕೂ ತೆರೆ ಬಿದ್ದಿದೆ.

ಕೆಲವರಿಗೆ ಅಸಮಾಧಾನ:
ಪಕ್ಷದೊಂದಿಗೆ ಸಂಬಂಧ ಕಡಿದುಕೊಂಡು ಮೂರು ವರ್ಷಗಳಿಂದ ದೂರ ಉಳಿದಿದ್ದ ಜಿಟಿಡಿ ಅವರ ಸಂಬಂಧ ಮರುಬೇಸುಗೆ ಆಗಿರುವುದು ಜೆಡಿಎಸ್‌ನಲ್ಲಿ ಕೆಲವರಿಗೆ ಅಸಮಾಧಾನವನ್ನೂ ತರಿಸಿದೆ. ಅವರೆಲ್ಲ ಬಹಿರಂಗವಾಗಿ ಆಕ್ರೋಶದ ಕಿಡಿ ಹೊರಹಾಕಿದ್ದಾರೆ.

ಜಿಟಿಡಿ, ಪಕ್ಷಕ್ಕೂ ಅನುಕೂಲ:
ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಜಿಟಿಡಿಗೆ ಪರಸ್ಪರ ಅಪ್ಪಿಕೊಳ್ಳುವಿಕೆ ಅನಿವಾರ್ಯವಾಗಿತ್ತು. ಇಲ್ಲವಾದರೆ, ಭವಿಷ್ಯದಲ್ಲಿ ಎರಡು ಕಡೆಗೂ ನಷ್ಟ ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗಾಗಿ, ಲಾಭ-ನಷ್ಟ ಲೆಕ್ಕಾಚಾರದ ಕುರಿತು ತೂಗಿ ಅಳೆದು, ಎರಡು ಕಡೆ ಸಂಧಾನವಾಗಿದೆ. ಇದು ಒಂದು ದಿನದ ಬೆಳವಣಿಗೆಯಲ್ಲ. ತೆರೆಮರೆಯಲ್ಲಿ ಕಳೆದ ಆರೇಳು ತಿಂಗಳು ರಾಜಿ ಸೂತ್ರವನ್ನು ಎಣೆಯಲಾಗಿದೆ. ಇದರ ಫಲವಾಗಿ ಗುರುವಾರ ಜಿಟಿಡಿ ಮನೆಯಲ್ಲಿ ಫಲಿತಾಂಶ ಪ್ರಕಟವಾಗಿದೆಯಷ್ಟೇ.

ಪುತ್ರನಿಗೂ ಟಿಕೆಟ್ ಪಕ್ಕಾ:
ಇಳಿ ವಯಸ್ಸಿನಲ್ಲಿರುವ ಜಿಟಿಡಿ ತನ್ನ ರಾಜಕೀಯಕ್ಕಿಂತ ಪುತ್ರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಅವರ ರಾಜಕೀಯ ಜೀವನಕ್ಕೆ ಬೂಸ್ಟರ್ ನೀಡಬೇಕಿದೆ. ಅದಕ್ಕಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಗ್ನಿಪರೀಕ್ಷೆಗೆ ಇಳಿಯಲು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ಟಿಕೆಟ್ ಕೊಡಿಸಲು ಕಸರತ್ತು ನಡೆಸಿ ಯಶಸ್ವಿಯಾಗಿದ್ದಾರೆ.

ಕೈ’ಕೊಟ್ಟರು:
ಜೆಡಿಎಸ್‌ನಿಂದ ದೂರವಾಗಿ ವನವಾಸದ ಸಂದರ್ಭದಲ್ಲಿ ಜಿಟಿಡಿ ಕಾಂಗ್ರೆಸ್ ಕಡೆಗೆ ಒಲವು ತೋರಿದ್ದರು. ಇದಕ್ಕೆ ಹಿಂದಿನ ರಾಜಕೀಯ ಕಹಿ ಘಟನೆ ಮರೆತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸಮ್ಮತಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊಡಲು ಭರವಸೆ ನೀಡಿದ್ದ ಅವರು, ಹರೀಶ್‌ಗೌಡರಿಗೆ ಟಿಕೆಟ್ ಕೊಡಿಸುವ ಕುರಿತು ಖಾತ್ರಿ ಕೊಡಲಿಲ್ಲ. ಇದು ಜಿಟಿಡಿಗೆ ಇಷ್ಟವಾಗಲಿಲ್ಲ. ಹೀಗಾಗಿ, ಕಾಂಗ್ರೆಸ್‌ಗೆ ಕೈಕೊಟ್ಟರು.

ಬಿಜೆಪಿಗೂ ನಿರಾಶೆ:
ಜಿಟಿಡಿ ಬಿಜೆಪಿ ಕಡೆಗೆ ಕೊಂಚ ಮನಸ್ಸು ಮಾಡಿದ್ದರು. ಆ ಕಡೆಯಿಂದಲೂ ಹಸಿರು ನಿಶಾನೆ ಸಿಕ್ಕಿತ್ತು. ತಂದೆ-ಮಗನಿಗೆ ಟಿಕೆಟ್ ಕೊಡಲು ಬಿಜೆಪಿ ನಾಯಕರು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕುಟುಂಬ ರಾಜಕಾರಣಕ್ಕೆ ವಿರುದ್ಧ ಇರುವ ಬಿಜೆಪಿ ವರಿಷ್ಠರು ಕೊನೇ ಕ್ಷಣದಲ್ಲಿ ಕೈಕೊಟ್ಟರೆ ಎಡವಟ್ಟು ಆಗಲಿದೆ. ಜತೆಗೆ, ಟಿಕೆಟ್ ಸಿಕ್ಕರೂ ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಲ್ಲಿ ಸಂಘಟನಾ ಬಲವಿಲ್ಲದ ಬಿಜೆಪಿಯಿಂದ ಗೆಲುವು ಕಷ್ಟಕರ ಎಂಬ ಲೆಕ್ಕಾಚಾರದ ಮೂಲಕ ಜಿಟಿಡಿ ಕಮಲಕ್ಕೆ ಕೆಂಪು ನಿಶಾನೆ ತೋರಿದ್ದಾರೆ. ಆದರೆ, ಬಿಜೆಪಿ ಸರ್ಕಾರದಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅನೇಕ ಕೆಲಸ-ಕಾರ್ಯ ಮತ್ತು ರಾಜಕೀಯ ಲಾಭ ಪಡೆದುಕೊಂಡಿರುವ ಜಿಟಿಡಿ ನಡೆ ಆ ಪಕ್ಷದ ನಾಯಕರಿಗೆ ನಿರಾಶೆ ಮೂಡಿಸಿದೆ.

ಡಬಲ್ ಧಮಾಕ:
ಈ ಬೆಳವಣಿಗೆ ಜಿಟಿಡಿ ಮತ್ತು ಜೆಡಿಎಸ್ ಎರಡಕ್ಕೂ ಅನುಕೂಲಕರವಾಗಿದೆ. ತಂದೆಗೆ ಚಾಮುಂಡೇಶ್ವರಿ ಕ್ಷೇತ್ರ ಮತ್ತು ಮಗನಿಗೆ ಹುಣಸೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ಖಾತ್ರಿಯಾಗಿದೆ. ಅಪ್ಪ-ಮಗ ಇಬ್ಬರೂ ಮುಂದಿನ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯಬಹುದಾಗಿದೆ. ಈ ರೀತಿ ಡಬಲ್ ಧಮಾಕ ಕೊಡುಗೆ ಕಾಂಗ್ರೆಸ್, ಬಿಜೆಪಿಗೆ ಹೋಗಿದ್ದರೂ ಸಿಗುತ್ತಿರಲಿಲ್ಲ. ಆದರೆ, ಜೆಡಿಎಸ್‌ನಲ್ಲಿ ಜಿಟಿಡಿಯ ರಕ್ಷಣಾತ್ಮಕ ಆಟಕ್ಕೆ ಹಳೇ ಮೈದಾನ ಹದವಾಗಿದೆ. ಅಲ್ಲದೆ, ಈ ಭಾಗದಲ್ಲಿ ಪಕ್ಷದ ಮೇಲೆ ಜಿಟಿಡಿಗೆ ಹಿಡಿತ ಮತ್ತೆ ದೊರೆತಿದೆ.

ಸೋತು ಗೆದ್ದ ಜೆಡಿಎಸ್:
ಈ ಬೆಳವಣಿಗೆಯಲ್ಲಿ ಜೆಡಿಎಸ್ ಸೋತು ಗೆದ್ದಿದೆ. ಜಿಟಿಡಿ ಮುಂದೆ ಮಂಡಿಯೂರಿದರೂ ರಾಜಕೀಯ ಲಾಭ ಹೆಚ್ಚಿದೆ. ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಇದು ಅನಿವಾರ್ಯವಾಗಿದೆ. ನಾಯಕತ್ವ ಕೊರತೆ ನೀಗಿದೆ. ಗೊಂದಲವೂ ಬಗೆಹರಿದಿದೆ. ಸಂಘಟನಾ ಬಲ ವೃದ್ಧಿಯಾಗಿದೆ. ಈ ಭಾಗದಲ್ಲಿ ದಳಕ್ಕೆ ಆನೆ ಬಲ ಬಂದಿದೆ. ಜತೆಗೆ, ಕಾರ್ಯಕರ್ತರಲ್ಲಿ ಹೊಸ ಚೈತನ್ಯ, ಹುರುಪು ತಂದುಕೊಟ್ಟಿದೆ.

ಸಾ.ರಾ.ಗೆ ಲಾಭ-ನಷ್ಟ:
ದಿಢೀರ್ ಬೆಳವಣಿಗೆ ಶಾಸಕ ಸಾ.ರಾ.ಮಹೇಶ್‌ರಿಗೆ ರಾಜಕೀಯವಾಗಿ ಹಿನ್ನಡೆಯಾಗಿದೆ. ಅವರೀಗ ಮೊದಲ ಸ್ಥಾನದಿಂದ 2ನೇ ಸ್ಥಾನಕ್ಕೆ ಇಳಿದಿದ್ದಾರೆ. ‘ಜಿಲ್ಲೆಯಲ್ಲಿ ಜಿಟಿಡಿ ನಾಯಕತ್ವದಲ್ಲಿ ಪಕ್ಷ ಮುನ್ನಡೆಯಲಿದೆ’ ಎಂಬ ಸಂದೇಶವನ್ನು ಎಚ್.ಡಿ.ದೇವೇಗೌಡರು ಕೊಟ್ಟಿದ್ದಾರೆ. ಹೀಗಾಗಿ, ಒಲ್ಲದ ಮನಸ್ಸಿನಿಂದಲೇ ಇದನ್ನು ಒಪ್ಪಿಕೊಂಡು ಹೋಗಬೇಕಿದೆ. ಇದರಲ್ಲೂ ಸಾ.ರಾ. ಅವರಿಗೆ ಅನುಕೂಲಕರ ವಾತಾವರಣವೂ ಇದೆ. ಜಿಟಿಡಿ ಎದುರುಹಾಕಿಕೊಂಡರೆ ಮುಂದಿನ ಚುನಾವಣೆಯಲ್ಲಿ ಬಹಳಷ್ಟು ತಿಣುಕಾಡಬೇಕಾಗಿತ್ತು. ಕಾಂಗ್ರೆಸ್, ಬಿಜೆಪಿ ಮತ್ತು ಜಿಟಿಡಿ ಒಂದಾಗಿ ಇವರನ್ನು ಅಣಿಯುತ್ತಿದ್ದರು. ಇದೀಗ ಅದೆಲ್ಲ ತಪ್ಪಿದ್ದು, ಪೂರಕ ಸನ್ನಿವೇಶ ಸೃಷ್ಟಿಯಾಗಿದೆ.