ಜಿಲ್ಲೆ

ಜಿಟಿಟಿಸಿ ತರಬೇತಿ ಆಗಸ್ಟ ತಿಂಗಳಿನಲ್ಲಿ ಆರಂಭ

ಹಾನಗಲ್ಲ: ಸರ್ಕಾರದ ಪ್ರತಿಷ್ಠಿತ ತಾಂತ್ರಿಕ ತರಬೇತಿ ಸಂಸ್ಥೆಯಾದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಆಗಸ್ಟ್​ನಲ್ಲಿ ಆರಂಭವಾಗಲಿದೆ. ಅರ್ಹ ವಿದ್ಯಾರ್ಥಿಗಳು ಆ. 7ರೊಳಗಾಗಿ ಪ್ರವೇಶ ಪಡೆಯಬೇಕು ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಾರಂಭಿಕ ಹಂತದಲ್ಲಿ ಜಿಟಿಟಿಸಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿನ ಕಟ್ಟಡದಲ್ಲಿ ಕೌಶಲ ತರಬೇತಿ ಆರಂಭಿಸಲಿದೆ. ಮುಂಬರುವ ದಿನಗಳಲ್ಲಿ ಸ್ವಂತ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ವಿುಸಿ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ.

ಈ ಭಾಗದ ಯುವ ಜನತೆಗೆ ಕೌಶಲ ತರಬೇತಿ ನೀಡಿ ಉದ್ಯೋಗ ಅವಕಾಶ ಕಲ್ಪಿಸುವುದು, ಕೈಗಾರಿಕೆಗಳಿಗೆ ಕುಶಲ ಮಾನವ ಸಂಪನ್ಮೂಲ ಒದಗಿಸುವುದು, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಹಾಗೂ ತರಬೇತಿಗಳ ನೆರವು ನೀಡುವ ಉದ್ದೇಶದಿಂದ ಹಾನಗಲ್ಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಸ್ಥಾಪಿಸಲಾಗುತ್ತಿದೆ. ಸದ್ಯ ಹಾನಗಲ್ಲಿನಲ್ಲಿ ಜಿಟಿಟಿಸಿಯು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಮತ್ತು ಕ್ಯಾಡ್​ಕ್ಯಾಮ್ ತತ್ರಾಂಶಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಶಾಸಕರು ತಿಳಿಸಿದ್ದಾರೆ.

ತಾಂತ್ರಿಕ ಮತ್ತು ಕೈಗಾರಿಕೆ ಉತ್ಪಾದನೆ ಕ್ಷೇತ್ರದಲ್ಲಿ ತರಬೇತಿ ನೀಡುವ ಪರಿಣತಿ ಹೊಂದಿರುವ ಜಿಟಿಟಿಸಿಯು ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೊಳಪಟ್ಟಿದೆ. ಕೈಗಾರಿಕೆಗಳಲ್ಲಿ ಅನುಭವ ಹೊಂದಿರುವ ಶಿಕ್ಷಕರಿಂದ ಪ್ರ್ಯಾಕ್ಟಿಕಲ್ ಇಂಟಿಗ್ರೇಟೆಡ್ ಆನ್​ಜಾಬ್ ತರಬೇತಿ ನೀಡುವುದು ಜಿಟಿಟಿಸಿಯ ವಿಶೇಷತೆಯಾಗಿದೆ. ಜಿಟಿಟಿಸಿಯಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳು ಶೇ. 100ಕ್ಕೆ ನೂರರಷ್ಟು ಉದ್ಯೋಗಾವಕಾಶಗಳನ್ನು ಹೊಂದಿರುತ್ತಾರೆ. ಜಿಟಿಟಿಸಿಯಲ್ಲಿ ತರಬೇತಿ ಪಡೆದ ತಂತ್ರಜ್ಞರಿಗೆ ಕೈಗಾರಿಕೆಗಳಲ್ಲಿ ಭಾರಿ ಬೇಡಿಕೆಯಿದೆ. ಈ ಸಂಸ್ಥೆಯು ಇದುವರೆಗೆ ರಾಜ್ಯದ 75,000 ಅಭ್ಯರ್ಥಿಗಳಿಗೆ ದೀರ್ಘಾವಧಿ ಮತ್ತು ಅಲ್ಪಾವಧಿ ತರಬೇತಿ ನೀಡಿದೆ. ತರಬೇತಿ ಪಡೆದ ಅಭ್ಯರ್ಥಿಗಳು ದೇಶ-ವಿದೇಶಗಳಲ್ಲಿನ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಯಶಸ್ವಿ ಸ್ವಯಂ ಉದ್ಯಮಿಗಳಾಗಿದ್ದಾರೆ ಎಂದು ಶಾಸಕ ಉದಾಸಿ ತಿಳಿಸಿದ್ದಾರೆ.

ಜಿಟಿಟಿಸಿಯು ಹಾನಗಲ್ಲ ಕೇಂದ್ರದಲ್ಲಿ ಕೌಶಲ ತರಬೇತಿಗಳು ಆಗಸ್ಟ್ ಮೊದಲ ವಾರದಲ್ಲಿ ಆರಂಭವಾಗಲಿವೆ. 2020-21ನೇ ಶೈಕ್ಷಣಿಕ ವರ್ಷದಲ್ಲಿ ಅಂದಾಜು 500 ಯುವಕ- ಯುವತಿಯರಿಗೆ ಕೌಶಲ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಇತರ ತಾಂತ್ರಿಕ ವೃತ್ತಿಗಳಲ್ಲಿ ಶುಲ್ಕ ಸಹಿತ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುವುದು.

ಎಸ್​ಎಸ್​ಎಲ್​ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿಇ ಉತ್ತೀರ್ಣರಾದ ಅಭ್ಯರ್ಥಿಗಳು ಈ ತರಬೇತಿಯ ಪ್ರವೇಶ ಪಡೆಯಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು, ಯುವಕ, ಯುವತಿಯರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆ. 7 ಕೊನೆಯ ದಿನವಾಗಿದೆ. ಮಾಹಿತಿಗೆ ಮೊ.ನಂ. 7411033510, 08379-2333159 ಸಂಪರ್ಕಿಸಬಹುದು ಎಂದು ಸಿ.ಎಂ. ಶಾಸಕ ಉದಾಸಿ ತಿಳಿಸಿದ್ದಾರೆ.