ಜಿಲ್ಲೆ

ಜಿಟಿ ಜಿಟಿ ಮಳೆಯಲ್ಲೂ ಬೊಮ್ಮಾಯಿ ಪ್ರಚಾರ

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಜಿಟಿ ಜಿಟಿ ಮಳೆಯ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.


ನಿಗದಿಗಿಂತ ಒಂದೂವರೆ ತಾಸು ತಡವಾಗಿ ಶುರುವಾದ ರೋಡ್ ಶೋಗೆ ಕುಂಬಾರಕೊಪ್ಪಲಿನ ಆದಿಶಕ್ತಿ ದೇವಸ್ಥಾನದಲ್ಲಿ ಚಾಲನೆ ದೊರೆಯಿತು. ಸೋಮವಾರ ಸಂಜೆ 4.25ಕ್ಕೆ ಹೊರಟ ಯಾತ್ರೆಯಲ್ಲಿ ಮುಖ್ಯಮಂತ್ರಿ ಅವರು ತೆರೆದ ವಾಹನದಲ್ಲಿ ಸಾಗಿದರು. ಅವರಿಗೆ ನಟಿ ತಾರಾ, ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮಾಜಿ ಶಾಸಕ ನರೇಂದ್ರಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಸಾಥ್ ನೀಡಿದರು.


ಕ್ಷೇತ್ರಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಕಾರ್ಯಕರ್ತರು ಹೂವಿನ ಮಳೆಗೈಯುವ ಮೂಲಕ ಸ್ವಾಗತಕೋರಿದರು. ಜಯಕಾರ ಹಾಕಿ ಸಂಭ್ರಮಿಸಿದರು. ಸಂಜೆ ಆಗುತ್ತಿದ್ದಂತೆ ಬಿಸಿಲಿನ ಬೇಗುದಿ ಕಡಿಮೆಯಾಗಿ ಆಕಾಶದಲ್ಲಿ ಮೋಡಮುಸುಕಿದ ವಾತಾವರಣ ನಿರ್ಮಾಣವಾಯಿತು. ಸೂರ್ಯಪ್ರಖರತೆ ಕಡಿಮೆಯಾಗಿದ್ದರಿಂದ ಕಾರ್ಯಕರ್ತರು

ಉತ್ಸಾಸದಿಂದ ಹೆಜ್ಜೆ ಹಾಕಿದರು.

ಕೆಲ ನಿಮಿಷಗಳ ಬಳಿಕ ಜಿಟಿ ಜಿಟಿ ಮಳೆ ಜಿನುಗಿತು. ಇದು ಇನ್ನಷ್ಟು ಹುರುಪು ಮೂಡಿಸಿತು. ಮಳೆ ಹನಿಯಿಂದ ತಂಪೆರೆದ ವಾತಾವರಣದಲ್ಲಿ ಜನರು ಬಿರುಸಿನಿಂದ ಸಾಗಿದರು. ನೂರಾರು ಜನರು ಸಮ್ಮುಖದಲ್ಲಿ ಸಾಗಿದ ರೋಡ್ ಶೋ ಮಂಚೇಗೌಡನಕೊಪ್ಪಲಿನ ಮೂಲಕ ಹೆಬ್ಬಾಳಿನ ಸೂರ್ಯ ಬೇಕರಿ ವರೆಗೂ ನಡೆಯಿತು.