ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಿಂದ ಕಾರ್ಯಕರ್ತರು ಎಂ.ಜಿ.ರಸ್ತೆಯ ಎಲೆಕ್ಟಾçನಿಕ್ಸ್ ಅಂಗಡಿಗಳಿಗೆ ಕಾಲ್ನಡಿಗೆ ಜಾಥಾದಲ್ಲಿ ಸಾಗಿ ಪಟಾಕಿ ಸಿಡಿಸಿದರು. ಬಳಿಕ ಅಂಗಡಿ ಸಿಬ್ಬಂದಿ, ಗ್ರಾಹಕರಿಗೆ ಸಿಹಿ ಹಂಚುವ ಮೂಲಕ ಜಿಎಸ್‌ಟಿ ವಿಜಯೋತ್ಸವ ಆಚರಿಸಿದರು. ಸಿ.ಟಿ.ರವಿ, ಎಂ.ಆರ್.ದೇವರಾಜಶೆಟ್ಟಿ, ಕೆ.ಎಸ್.ಪುಷ್ಪರಾಜ್, ಸಂತೋಷ್ ಕೋಟ್ಯಾನ್, ಎಚ್.ಎಸ್.ಪುಟ್ಟಸ್ವಾಮಿ, ಜಸಂತಾ ಅನಿಲ್ ಕುಮಾರ್, ಕವಿತಾ ಶೇಖರ್ ಮತ್ತಿತರರಿದ್ದರು. 
ಜಿಲ್ಲೆ

ಜಿಎಸ್‌ಟಿ ಇಳಿಕೆಯಿಂದ ಜನರಿಗೆ ಅನುಕೂಲ

ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜನತೆಯ ತೆರಿಗೆ ಹೊರೆ ಹೆಚ್ಚಿಸಿ ಪಾಪ ಕಟ್ಟಿಕೊಂಡರೆ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ನಾಗರೀಕರ ಜಿಎಸ್‌ಟಿಯನ್ನು ಇಳಿಕೆಗೊಳಿಸುವ ಮುಖಾಂತರ ಪುಣ್ಯ ಕಟ್ಟಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಕಾರ್ಯಕರ್ತರು ಎಂ.ಜಿ.ರಸ್ತೆಯ ಎಲೆಕ್ಟಾçನಿಕ್ಸ್ ಅಂಗಡಿಗಳಿಗೆ ಕಾಲ್ನಡಿಗೆ ಜಾಥಾದಲ್ಲಿ ಸಾಗಿ ಪಟಾಕಿ ಸಿಡಿಸಿದರು. ಬಳಿಕ ಅಂಗಡಿ ಸಿಬ್ಬಂದಿ, ಗ್ರಾಹಕರಿಗೆ ಸಿಹಿ ಹಂಚುವ ಮೂಲಕ ಜಿಎಸ್‌ಟಿ ವಿಜಯೋತ್ಸವವನ್ನು ಸಂಭ್ರಮದಿAದ ಆಚರಿಸಿ ಬಳಿಕ ಮಾತನಾಡಿದರು.

ರಾಜ್ಯದಲ್ಲಿ ಹುಟ್ಟಿದ ಮಕ್ಕಳು ಸೇರಿದಂತೆ ಸತ್ತ ಹೆಣದ ಮೇಲೂ ತೆರಿಗೆಯಿದೆ ಹಾಗೂ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದರೆ ಅತಿ ಹೆಚ್ಚು ದರವಿದೆ. ನವರಾತ್ರಿಯಂದು ದಸರಾ ಆನಂದಿಸಲು ತೆರಳಲಾಗುತ್ತಿಲ್ಲ. ಅದು ಕೂಡಾ ಶ್ರೀಮಂತರ ದಸರಾವಾಗಿದೆ. ಪಂಜಿನ ಕವಾಯಿತ್‌ಗೆ ೩ ಸಾವಿರ, ಯುವದಸರಾ ವೀಕ್ಷಣೆಗೆ ೬ ಸಾವಿರ ರೂ. ಈ ರೀತಿ ದರ ಏರಿಕೆ ಮಾಡಿ ಬಡವರಿಗೆ ಅನ್ಯಾಯ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಿಷ್ಟ ಪ್ರಧಾನಿ ಹಾದಿಯಲ್ಲಿ ಎರಡು ಹೆಜ್ಜೆ ಸಾಗಲಿ ಸಾಕು. ಆಗ ರಾಜ್ಯ ಜನತೆಗೆ ಹಾಗೂ ವೈಯಕ್ತಿಕವಾಗಿ ಒಳಿತಾಗಲಿದೆ. ಮೋದಿಯವರು ತೆರಿಗೆ ಇಳಿಸಿ ರಾಜ್ಯಕ್ಕೆ ಲಾಭಾಂಶ ನೀಡಿದರೆ, ಸಿದ್ದರಾಮಯ್ಯನವರು ತೆರಿಗೆ ಹೆಚ್ಚಿಸಿ ಪಾಪವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಶೀಘ್ರವೇ ಈ ಪಾಪದಿಂದ ಮುಕ್ತರಾಗಿ ಪುಣ್ಯ ಕಟ್ಟಿಕೊಳ್ಳುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಕ್ಷಣ ೨೦ ರೂ. ಛಾಪಾಕಾಗದ ೨೦೦ ರೂ., ೧೫ ರೂ. ಪಹಣಿ ಬೆಲೆ ೩೦ ರೂ., ೧೦ ರೂ.ನ ಜನನ ಪ್ರಮಾಣಪತ್ರ ೫೦ ರೂ., ಸಬ್‌ರಿಜಿಸ್ಟರ್ ದರ ಎರಡುಪಟ್ಟು ಹೆಚ್ಚಳ, ಮೋಟಾರ್ ವಾಹನ ತೆರಿಗೆ ಹೆಚ್ಚು, ಅಡುಗೆ ಎಣ್ಣೆಯಿಂದ ಕುಡಿಯುವ ಎಣ್ಣೆವರೆಗೂ ಬೆಲೆಏರಿಸಿ ಗ್ರಾಹಕರಿಗೆ ಬರೆ ಎಳೆಯಲಾಗುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹೊರೆಯಾಗದೆಂಬ ದೃಷ್ಟಿಯಿಂದ ಒಂದು ದೇಶ, ಒಂದೇ ತೆರಿಗೆ ಚಿಂತನೆಯಡಿ ೧೩ ಬಗೆಯ ಸೆಸ್ ಹಾಗೂ ೧೭ ವಿವಿಧ ರೀತಿಯ ತೆರಿಗೆಗಳನ್ನು ರದ್ದುಪಡಿಸಿ, ಜನತೆ ಕಷ್ಟದಿಂದ ವಿಮುಕ್ತರಾಗಿ ಹಾಗೂ ಸುಲಭವಾಗಿ ಉದ್ಯೋಗ ನಡೆಸುವಂತೆ ಮಾಡಿದೆ. ಅಲ್ಲದೇ ೨೨ ವಿವಿಧ ಬಗೆಯ ಜೀವರಕ್ಷಕ ಔಷಧಗಳ ಮೇಲೆ ಶೂನ್ಯ ತೆರಿಗೆ ವಿಧಿಸಿದೆ ಎಂದರು.

ಎಲ್ಲ ಬಗೆಯ ಜೀವರಕ್ಷಕ ಔಷಧಗಳಿಗೆ ಶೇ. ೧೮ರಷ್ಟಿದ್ದ ತೆರಿಗೆ ಶೇ. ೫ಕ್ಕೆ ಇಳಿಸಿ ನೇರ ಲಾಭವನ್ನು ಗ್ರಾಹಕರಿಗೆ ಮಾಡಿಕೊಟ್ಟಿದ್ದಾರೆ. ಕಟ್ಟಡ ಸಾಮಾಗ್ರಿಗಳಾದ ಸಿಮೆಂಟ್, ಕಬ್ಬಿಣ ಇತ್ಯಾದಿ ವಸ್ತು, ಖಾಸಗಿ ವಾಹನಗಳ ಖರೀದಿಯಲ್ಲಿ ಶೇ. ೨೮ರಷ್ಟಿದ್ದ ತೆರಿಗೆ ಶೇ. ೧೮ರಷ್ಟಾಗಿದೆ. ಎಲೆಕ್ಟಾçನಿಕ್ ವಸ್ತುಗಳು, ಹಾಲು, ಮೊಸರು, ಬೆಣ್ಣೆ, ತುಪ್ಪ ಇತ್ಯಾದಿಗಳ ತೆರಿಗೆಯನ್ನು ಶೇ. ೫ರಷ್ಟು ಇಳಿಸಿ ದಸರಾಗೆ ಬಂಪರ್ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಇನ್ನುಳಿದಂತೆ ಆರೋಗ್ಯ ಹಾನಿಕಾರಕ ವಸ್ತುಗಳಾದ ಗುಟ್ಕಾ, ತಂಬಾಕು ವಸ್ತುಗಳು ಬೆಲೆ ಏರಿಕೆಗೊಂಡಿವೆ ಹಾಗೂ ಬಹುತೇಕ ಶ್ರೀಮಂತರು ಉಪಯೋಗಿಸುವ ಐಶರಾಮಿ ವಸ್ತುಗಳು ಬೆಲೆಏರಿಕೆಗೊಂಡಿದೆ. ಅಲ್ಲದೇ ಬಡವರು, ವರ್ತಕರು, ಉತ್ಪಾದಕರ, ಗ್ರಾಹಕರ ಪರವಾಗಿ ಉತ್ತಮ ನಿರ್ಣಯ ಕೈಗೊಂಡಿರುವ ಪ್ರಧಾನಿಗಳು ಜನಸಾಮಾನ್ಯರು ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ದೇಶದ ಜನರಿಗೆ ಹಬ್ಬದ ವಾತಾವರಣವನ್ನು ನರೇಂದ್ರ ಮೋದಿ ಸರ್ಕಾರ ಮಾಡಿಕೊಟ್ಟಿದೆ. ದೇಶದ ಜನರಿಗೆ ಶೇ. ೨೮ರ ಜಿಎಸ್‌ಟಿ ತೆರಿಗೆಯನ್ನು ಶೇ. ೧೮ಕ್ಕೆ ಇಳಿಕೆ, ಶೇ. ೧೮ರ ತೆರಿಗೆ ಶೇ. ೫ಕ್ಕೆ ಇಳಿಕೆ ಹಾಗೂ ಬಹುತೇಕ ಶೇ. ೯೯ಮಂದಿ ಬಳಸುವಂತ ವಸ್ತುಗಳ ಶೇ. ೫ರ ಜಿಎಸ್‌ಟಿ ತೆರಿಗೆಯನ್ನು ಶೂನ್ಯಗೊಳಿಸುವ ಮೂಲಕ ಸಂತಸದ ವಾತಾವರಣ ಸೃಷ್ಟಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಸದಸ್ಯರಾದ ಕವಿತಾ ಶೇಖರ್, ಮಧುಕುಮಾರ್, ಮುಖಂಡರಾದ ಎಚ್.ಎಸ್.ಪುಟ್ಟಸ್ವಾಮಿ, ಎಚ್.ಕೆ. ಕೇಶವಮೂರ್ತಿ, ಕೌಶಿಕ್, ದಿನೇಶ್, ಬೆನಡಿಕ್ಟ್ ಜೇಮ್ಸ್, ಪ್ರದೀಪ್ ಮತ್ತಿತರರಿದ್ದರು.