ಜಿಲ್ಲೆ

ಜಿಂಕೆಗಳ ಜೀವಕ್ಕೆ ಶ್ವಾನಗಳೇ ಕಂಟಕ

ಚಾಮರಾಜನಗರ: ಬೇಸಿಗೆ ಆರಂಭವಾಗುತಿದ್ದಂತೆಯೇ ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಜಿಂಕೆಗಳ ಜೀವಕ್ಕೆ ಕಂಟಕ ಶುರುವಾಗಿದೆ. ಇದು ದೇಶದ ಪ್ರಸಿದ್ಧ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಿಂದಲೇ ಆರಂಭಗೊಂಡಿದೆ.

ಬೇಸಿಗೆ ಕಾಲದಲ್ಲಿ ನೀರು, ಆಹಾರ ಅರಸಿ ಕಾಡಿನಿಂದ ಗ್ರಾಮಗಳಿಗೆ ಬರುತ್ತಿರುವ ಜಿಂಕೆಗಳ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಬಲಿ ಪಡೆಯುತ್ತಿವೆ. ಬೀದಿನಾಯಿಗಳು ಜಿಂಕೆಗಳ ಪಾಲಿಗೆ ಕಂಟಕವಾಗಿ ಪರಿಣಮಿಸುತ್ತಿವೆ. ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ದಿಕ್ಕು ತಪ್ಪಿಯೋ ಅಥವಾ ನೀರು, ಆಹಾರ ಅರಸಿ ಬರುತ್ತಿರುವ ಜಿಂಕೆಗಳು ಬೀದಿನಾಯಿಗಳಿಗೆ ಆಹಾರವಾಗಿ ಹೋಗುತ್ತಿವೆ.

ಮಾ.15ರ ರಾತ್ರಿ ಆಹಾರ ಅರಸಿ ಗುಂಡ್ಲುಪೇಟೆ ತಾಲೂಕಿನ, ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಗ್ರಾಮ ಕಾಳನಹುಂಡಿಗೆ ಬಂದಿದ್ದ 3 ವರ್ಷದ ಗಂಡು ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಸಾಯಿಸಿದ್ದವು. ಇದು ಈ ವರ್ಷದ ಬೇಸಿಗೆ ಕಾಲದಲ್ಲಿ ಬೀದಿನಾಯಿಗಳ ದಾಳಿಗೆ ಬಲಿಯಾದ ಮೊದಲ ಜಿಂಕೆಯಾಗಿದೆ.

ಕಳೆದ ವರ್ಷ ಕಾಡನ್ನು ಕಾಡಿದ ಬೇಸಿಗೆ ಜಿಂಕೆಗಳ ಪಾಲಿಗೂ ಸಮಸ್ಯೆ ತಂದೊಡ್ಡಿತು. ಮಳೆಯಾಶ್ರಿತ ಪ್ರದೇಶವಾಗಿರುವ ಹನೂರು ತಾಲೂಕಿನ ವ್ಯಾಪ್ತಿಯ, ಮಲೆ ಮಹದೇಶ್ವರ ವನ್ಯಜೀವಿಧಾಮದ ವಲಯಗಳಲ್ಲಿ ಬರೋಬ್ಬರಿ 8 ಜಿಂಕೆಗಳು ನಾಯಿ ದಾಳಿಗೆ ಪ್ರಾಣ ಬಿಟ್ಟವು.

ಅರಣ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2024ರಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಿ.ಜಿ.ಪಾಳ್ಯ, ರಾಮಾಪುರ ವಲಯಗಳಲ್ಲಿ ಸಾವು ಸಂಭವಿಸಿದ್ದವು. ಕಾಡುನಾಯಿಗಳ ದಾಳಿಗೆ 2 ಗಂಡು ಜಿಂಕೆಗಳು, ಆಹಾರ ಅರಸಿ ನಾಡಿಗೆ ಬಂದಿದ್ದ 6 ಗಂಡು ಜಿಂಕೆಗಳು ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದವು.

ಜಮೀನಿನಲ್ಲಿ ಸಿಗದಿದ್ದರೆ ಗ್ರಾಮಕ್ಕೆ:

ಸಸ್ಯಹಾರಿ ಪ್ರಾಣಿಯಾಗಿರುವ ಜಿಂಕೆ ನಿತ್ಯವೂ ಹೋರಾಟದ ಜೀವನ ನಡೆಸುತ್ತಿದೆ. ಮಾಂಸಾಹಾರಿ ಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋರಾಟ ಮಾಡುತ್ತಲೇ ಇರುತ್ತವೆ. ಈ ಸವಾಲಿನೊಂದಿಗೆ ಬೇಸಿಗೆ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಕಾಡುಗಳಲ್ಲಿ ನೀರಿನ ಬವಣೆ, ಆಹಾರಕ್ಕೆ ಹಾಹಾಕಾರ ಎದುರಾದಾಗ ಜಿಂಕೆಗಳು ಗ್ರಾಮಗಳ ಕಡೆ ಧಾವಿಸುತ್ತಿವೆ. ಬೇಸಿಗೆಯಲ್ಲಿ ಸಸ್ಯ ಸಂಪತ್ತು ಸೊರಗಿ ಹೋಗುತ್ತದೆ. ಹುಲ್ಲುಗಾವಲು ಪ್ರವೇಶ ಒಣಗಿ ಹೋಗಿ ಭೂಮಿ ಬರಡಾಗುತ್ತದೆ. ಸಸ್ಯಹಾರಿ ಪ್ರಾಣಿ ಜಿಂಕೆಗಳಿಗೆ ಮೇವು ಮತ್ತು ನೀರಿನ ಕೊರತೆ ಎದುರಾದರೆ ಗ್ರಾಮಗಳತ್ತ ಬಂದುಬಿಡುತ್ತವೆ. ಕಾಡಂಚಿನ ಗ್ರಾಮಗಳ ಜಮೀನುಗಳಿಗೆ ಜಿಂಕೆಗಳು ಲಗ್ಗೆ ಇಟ್ಟು ಬೆಳೆ ನಾಶ ಪಡಿಸುತ್ತಲೇ ಇರುತ್ತವೆ. ರೈತರು ನಷ್ಟ ಅನುಭವಿಸುತ್ತಲೇ ಇದ್ದಾರೆ. ಬೇಸಿಗೆಯಲ್ಲಿ ನೀರಿನ ಕೊರತೆಯಾದರೆ ಕಾಡಂಚಿನ ಗ್ರಾಮಗಳ ರೈತರ ಭೂಮಿ ಪಾಳುಬೀಳುತ್ತದೆ. ಕಾಡಿನ ಸಮೀಪದಲ್ಲೇ ಇರುವ ಜಮೀನುಗಳಲ್ಲಿ ಆಹಾರ ಸಿಗದೆ ಇದ್ದಾಗ ಜಿಂಕೆಗಳು ಗ್ರಾಮಗಳಿಗೆ ನುಗ್ಗಿವೆ. ಈ ವೇಳೆ ಬೀದಿನಾಯಿಗಳು ದಾಳಿ ಮಾಡುತ್ತಿವೆ.

ನಗರ, ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ. ಮನುಷ್ಯರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸುತ್ತಿವೆ. ಇವುಗಳ ನಿಯಂತ್ರಣಕ್ಕೆ ಸಂತಾನ ಶಕ್ತಿ ಹರಣ ಶಸಚಿಕಿತ್ಸೆಯೊಂದೇ ಪರಿಹಾರವಾಗಿದೆ. ಹೀಗಿರುವಾಗ ಕಾಡಿನಿಂದ ಗ್ರಾಮಕ್ಕೆ ಬರುವ ಜಿಂಕೆಯ ಮೇಲೆ ಬೀದಿನಾಯಿಗಳ ಕ್ರೌರ್ಯ ಭಯಂಕರ.

ಮುಖಾಮುಖಿಯಾಗಿಸುವ ‘ಬೇಸಿಗೆ’:

ಬೇಸಿಗೆ ಕಾಲದ ಕರಾಳ ಮುಖಗಳು ಹತ್ತು ಹಲವು. ವನ್ಯಜೀವಿಯಾಗಿರುವ ಜಿಂಕೆಗಳು ಮತ್ತು ಬೀದಿನಾಯಿಗಳ ನಡುವಿನ ಮುಖಾಮುಖಿಯನ್ನು ಬಹುಪಾಲು ಮಾಡಿಸುವುದೇ ಬೇಸಿಗೆ. ಜಿಲ್ಲೆಯ ಕಾಡುಗಳಲ್ಲಿ ಅಗಾಧ ಸಂಖ್ಯೆಯಲ್ಲಿ ಜಿಂಕೆಗಳಿವೆ. ಇದೇ ರೀತಿ ನಾಡಿನಲ್ಲಿ ಗಲ್ಲಿ,ಗಲ್ಲಿಗಳೂ ಬೀದಿನಾಯಿಗಳ ಹಿಂಡುಗಳಿವೆ. ಕಾಡಿಗೆ ಹೋದರೆ ಯಾವ ಪ್ರಾಣಿಗಳ ದರ್ಶನವಾಗುವುದೋ ಇಲ್ಲವೋ ಗೊತ್ತಿಲ್ಲ, ಆದರೆ ಜಿಂಕೆಗಳಂತೂ ಕಾಣಸಿಗುತ್ತವೆ. ಹಾಗೆಯೇ ನಾಡಿನಲ್ಲಿ ಯಾವ ಬೀದಿಗೇ ಹೋದರೂ ನಾಯಿಗಳು ಇದ್ದೇ ಇರುತ್ತವೆ. ತಾಪಮಾನದ ಏರಿಕೆಯಿಂದ ಉಂಟಾಗುತ್ತಿರುವ ಪ್ರಭಾವ ಈ ಎರಡೂ ಪ್ರಾಣಿಗಳನ್ನು ಮುಖಾಮುಖಿ ಮಾಡುತ್ತಿವೆ.

ಪ್ರಸ್ತುತ ಸ್ಥಿತಿ ಮೇಲೆ ಜಿಂಕೆಗಳ ಗತಿ ಆಧಾರ: ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಅರಣ್ಯ ಪ್ರದೇಶಗಳು ತುಸು ನಿರಾಳವಾಗಿವೆ. ಒಣಗುತ್ತಿದ್ದ ಗಿಡ, ಮರಗಳಲ್ಲಿ ಹಸಿರು ಉಳಿದಿದೆ. ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಕೆರೆಗಳಿವ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಕೆರೆಗಳಿವೆ. ಮಲೆ ಮಹದೇಶ್ವರ ವನ್ಯಜೀವಿಧಾಮ, ಕಾವೇರಿ ವನ್ಯಜೀವಿಧಾಮದ ಕೆರೆಗಳಲ್ಲಿ ಪ್ರಸ್ತುತ ನೀರಿನ ಮಟ್ಟ ಕುಸಿದಿಲ್ಲ. ನೀರು ಮತ್ತು ಮೇವಿನ ಲಭ್ಯತೆ ಆಧಾರದ ಮೇಲೆ ಜಿಂಕೆಗಳ ಜೀವ ಉಳಿವು ನಿರ್ಧಾರವಾಗುತ್ತಿದೆ.

ಜಿಂಕೆಗಳು ಕಾಡಿನಿಂದ ನಾಡಿಗೆ ಬರುವುದನ್ನು ಆಯಾ ಪ್ರಕರಣಗಳ ಆಧಾರದ ಮೇಲೆ ಕಾರಣಗಳನ್ನು ಗುರುತಿಸಬಹುದು. ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಕೆರೆಗಳಿವೆ. ಪ್ರಸ್ತುತ ಮಳೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರಿದೆ. ಹಾಗಾಗಿ ಜಿಂಕೆ ಮತ್ತು ಇತರೆ ಪ್ರಾಣಿಗಳಿಗೆ ಸದ್ಯಕ್ಕೆ ನೀರು, ಆಹಾರದ ಕೊರತೆಯಾಗುವುದಿಲ್ಲ. ಶ್ರೀಪತಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ, ಚಾಮರಾಜನಗರ