ಹನೂರು: ತಾಲೂಕಿನ ಅಜ್ಜೀಪುರ ಸಮೀಪದ ತೋಟದ ಮನೆಯೊಂದರ ಮೇಲೆ ಶುಕ್ರವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಜಿಂಕೆ ಬೇಟೆಯಾಡಿ ಮಾಂಸವನ್ನು ಬೇರ್ಪಡಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದ ಮುತ್ತಪ್ಪ (48), ಇರ್ಫಾನ್ ಬೇಗ್ (31), ಸಲೀಮ್ (28) ಹಾಗೂ ಅಜ್ಜೀಪುರ ಗ್ರಾಮದ ವೆಂಕಟೇಶ್ (29) ಬಂಧಿತರು.
ಬಂಧಿತರು ಮಲೆಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ನಾಡ ಬಂದೂಕಿನಿಂದ ಜಿಂಕೆಯನ್ನು ಹತ್ಯೆಗೈದು ಅಜ್ಜೀಪುರ ಸಮೀಪದ ಅಯ್ಯಂ ಪೆರುಮಾಳಗೌಂಡರ್ ತೋಟದ ಮನೆಯಲ್ಲಿ ಮಾಂಸವನ್ನು ಬೇರ್ಪಡಿಸಿಕೊಳ್ಳುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರ್‌ಎಫ್‌ಒ ಪ್ರವೀಣ್‌ಕುಮಾರ್ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಅವರಿಂದ 1 ನಾಡ ಬಂದೂಕು, 11 ಕೆ.ಜಿ. ಜಿಂಕೆ ಮಾಂಸ, 2 ಬೈಕ್, ತಲೆಗೆ ಕಟ್ಟಿಕೊಳ್ಳುವ ಬ್ಯಾಟರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದೆ. ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿ, ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ದಾಳಿಯಲ್ಲಿ ಡಿಆರ್‌ಎಫ್‌ಒ ಸಾಲನ್, ಸಿಬ್ಬಂದಿಗಳಾದ ಅನಿಲ್‌ಕುಮಾರ್, ಪರಶುರಾಮ್, ಪ್ರಭು, ಗಣೇಶ್ ಭಾಗವಹಿಸಿದ್ದರು.