ಹನೂರು: ತಾಲೂಕಿನ ಗಡಿ ಗೋಪಿನಾಥಂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಜಿಂಕೆಯನ್ನು ಬೇಟೆಯಾಡಿ ಗ್ರಾಮದ ಮನೆಯಲ್ಲಿ ಪ್ರತ್ಯೇಕವಾಗಿ ಬಾಡೂಟದ ಅಡುಗೆ ತಯಾರಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದು, ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ.
ತಾಲೂಕಿನ ಆಲಂಬಾಡಿ ಗ್ರಾಮದ ಪರಶಿವಮೂರ್ತಿ (26), ಮಾದೇಶ (44) ಸೇಟು ಆಲಿಯಾಸ್ ರಾಜ (27) ಹಾಗೂ ಮೆಂದಾರೆ ಗ್ರಾಮದ ಪುಟ್ಟ (35) ಎಂಬುವರೇ ಬಂಧಿತರು. ರಾಜು ತಲೆಮರೆಸಿಕೊಂಡಿರುವ ಆರೋಪಿ.
ಇವರೆಲ್ಲರೂ ಸೋಮವಾರ ರಾತ್ರಿ ಕಾವೇರಿ ವನ್ಯಜೀವಿ ವಿಭಾಗದ ಗೋಪಿನಾಥಂ ವಲಯದ ಗೌಡಿಕರೆ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಿಂಕೆಯನ್ನು ಸಾಕು ನಾಯಿಯಿಂದ ಬೇಟೆಯಾಡಿದ್ದು, ಇದರ ಮಾಂಸವನ್ನು ಸಮನಾಗಿ ಹಂಚಿಕೊಂಡು ಮನೆಗೆ ಕೊಂಡೋಯ್ದು ಪ್ರತ್ಯೇಕವಾಗಿ ಅಡುಗೆ ತಯಾರಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರ್‌ಎಫ್‌ಒ ಲೋಕೇಶ್ ಚವ್ಹಾಣ್ ಅವರ ಮಾರ್ಗದರ್ಶನದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆಗಳ ಮೇಲೆ ದಾಳಿ ನಡೆಸಿದಾಗ ನಾಲ್ವರು ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.
ಬಳಿಕ ಅಡುಗೆ ತಯಾರಿಸಿದ್ದ ಜಿಂಕೆ ಮಾಂಸದ ಆಹಾರ, ಪರಿಕರ ಹಾಗೂ ಹಸಿ ಮಾಂಸವನ್ನು ವಶಕ್ಕೆ ಪಡೆದ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ಮಂಗಳವಾರ ಕೊಳ್ಳೇಗಾಲ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.
ಇವರ ಆದೇಶದ ಮೇರೆಗೆ ಚಾ.ನಗರ ಜಿಲ್ಲಾ ಕಾರ್ಯಾಗೃಹದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇಲಾಖೆಯ ಅಧಿಕಾರಿಗಳು ಮತ್ತೊಬ್ಬನ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.