ಮುಂಡಗೋಡ: ಪಕ್ಷ, ಜಾತಿ-ಬೇಧವಿಲ್ಲದೆ ಎಲ್ಲ ಬಡ ಫಲಾನುಭವಿಗಳಿಗೆ ಜಿ+7 ಮಾದರಿಯ ಸಮುಚ್ಚಯ ನಿರ್ಮಾಣ ಕಟ್ಟಡದಲ್ಲಿ ಮನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಮಳಗನಕೊಪ್ಪ ಸ.ನಂ. 7ರಲ್ಲಿ ಜಿ+7 ಮಾದರಿಯ ಸಮುಚ್ಚಯ ನಿರ್ವಣಕ್ಕೆ ಮಂಜೂರಿಯಾದ ಜಮೀನಿನ ಜಂಗಲ್ ಕ್ಲೀನಿಂಗ್(ಅರಣ್ಯ ತೆರವು) ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಒಟ್ಟು 1700 ಅರ್ಜಿಗಳನ್ನು ನೀಡಲಾಗಿತ್ತು. 1070 ಜನರು ಅರ್ಜಿಗಳನ್ನು ಭರ್ತಿ ಮಾಡಿ ಕೊಟ್ಟಿದ್ದಾರೆ. ತಹಸೀಲ್ದಾರ್ ನೇತೃತ್ವದಲ್ಲಿ ರಚಿಸಲಾದ ಅಧಿಕಾರಿಗಳ ತಂಡ ಅರ್ಜಿಗಳನ್ನು ಪರಿಶೀಲಿಸುತ್ತದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಹಕರಿಸಬೇಕು. ಯಾವ ಕಾರಣಕ್ಕೂ ಮೋಸವಾಗಬಾರದು. ಫಲಾನುಭವಿಗಳಿಗೆ ಮನೆ ಕೊಡಿಸುವುದಾಗಿ ಹೇಳಿ ಯಾರೂ ಹಣ ಪಡೆಯಬಾರದು ಮತ್ತು ಫಲಾನುಭವಿಗಳು ಕೂಡ ಯಾರಿಗೂ ನಯಾ ಪೈಸೆ ನೀಡಬಾರದು ಎಂದು ಮನವಿ ಮಾಡಿದರು. ಫಲಾನುಭವಿಗಳು ಮನೆ ಪಡೆದುಕೊಂಡ ನಂತರ ಯಾರಿಗೂ ಮಾರಾಟ ಮಾಡುವ ಹಾಗಿಲ್ಲ ಎಂದು ತಾಕೀತು ಮಾಡಿದರು.
ಇದಕ್ಕೂ ಮುನ್ನ ಅವರು ಪಟ್ಟಣದ ಲಮಾಣಿ ತಾಂಡಾದ ಸೇವಾಲಾಲ ಸಮುದಾಯ ಭವನ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ಎಲ್.ಟಿ. ಪಾಟೀಲ ಮುಖಂಡರಾದ ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ಮಂಜು ಕಟಗಿ, ಕೆಂಜೋಡಿ ಗಲಬಿ, ರಾಮು ಲಮಾಣಿ, ಶೇಖರ ಲಮಾಣಿ, ಪ.ಪಂ. ಸದಸ್ಯರು, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಸಿಪಿಐ ಪ್ರಭುಗೌಡ ಡಿ.ಕೆ., ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯಾ, ಎಸಿಎಫ್ ಎಸ್.ಎಂ. ವಾಲಿ, ಆರ್ಎಫ್ಒ ಸುರೇಶ ಕುಳ್ಳೊಳ್ಳಿ ಇತರರಿದ್ದರು.