ದಾವಣಗೆರೆ: ಬೆಂಗಳೂರಿನ ದೇವನಹಳ್ಳಿ ಸೇರಿ ರಾಷ್ಟ್ರಾದ್ಯಂತ ಆಯೋಜಿಸುತ್ತಿರುವ ಜಿ-20 ಶೃಂಗ ಸಭೆಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎದುರಿನ ರಸ್ತೆಯಲ್ಲಿ ರೈತರು ಕಪ್ಪು ಪಟ್ಟಿ ಧರಿಸಿ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ರ‌್ಯಾಲಿ ಮೂಲಕ ತೆರಳಿ ಅಲ್ಲಿನ ಅಧಿಕಾರಿಗಳ ಮೂಲಕ ಸಿಎಂಗೆ ಮನವಿಪತ್ರ ರವಾನಿಸಿದರು.
ಪ್ರಧಾನಿ ನರೇಂದ್ರ ಮೋದಿ ಇದುವರೆಗೆ ಅಂಬಾನಿ, ಆದಾನಿಯವರನ್ನು ಆರ್ಥಿಕವಾಗಿ ಬಲಪಡಿಸಿ ಮುಂದುವರಿದ ಭಾಗವಾಗಿ ಅವರ ಆರ್ಥಿಕ ವ್ಯವಹಾರಗಳ ಮುಖಾಂತರ ಜಾಗತಿಕವಾಗಿ ಭಾರತವನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳುವ ಹುನ್ನಾರವೇ ಈ ಶೃಂಗ ಸಭೆಗಳದಾಗಿದೆ ಎಂದು ಟೀಕಿಸಿದರು.
ಕೋವಿಡ್ ಕಾಲದಲ್ಲಿ ದೇಶದ ಜಿಡಿಪಿ ನೆಲಕಚ್ಚಿದೆ. ಭಾರತದಲ್ಲಿ ಶೇ.85ರಷ್ಟು ಜಿಡಿಪಿ ಚೇತರಿಕೆ ಕಂಡಿರುವ ಮತ್ತು ಶೇ. 71ರಷ್ಟು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ಆರ್ಥಿಕ ಚೇತರಿಕೆಯ ಉದ್ದೇಶ ಹೊಂದಿವೆ ಎಂಬುದು ಗಾಳಿಗೋಪುರವಾಗಿದೆ. ಸ್ವಾವಲಂಭಿ ಹಾಗೂ ಪ್ರಾಕೃತಿಕ ಸಂಪನ್ಮೂಲ ಹೊಂದಿದ ಭಾರತದಲ್ಲಿ ಎಲ್ಲವನ್ನೂ ನಮ್ಮವರ ಮುಖಾಂತರವೇ ಕೊಳ್ಳೆ ಹೊಡೆಯುವ ಸಂಚು ಈ ಸಭೆಗಳದು ಎಂದು ದೂರಿದರು.
ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಜಿಲ್ಲಾಧ್ಯಕ್ಷ ಪರಶುರಾಮಪುರದ ಮರುಳಸಿದ್ದಯ್ಯ, ಪ್ರ, ಕಾರ್ಯದರ್ಶಿ ಗೋಶಾಲೆ ಬಸವರಾಜ್, ನಲ್ಕುದುರೆ ಚನ್ನಬಸಪ್ಪ, ಸಿ.ಆರ್. ತಿಪ್ಪೇಶಪ್ಪ, ಕೆ.ವಿ.ರುದ್ರಮುನಿ, ಬೀರಪ್ಪ ಮಾಯಕೊಂಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕುಮದ್ವತಿ ದೊಡ್ಡಘಟ್ಟ, ರಾಜು ಹೊನ್ನೂರು ಇತರರು ಭಾಗವಹಿಸಿದ್ದರು.