ಜಿಲ್ಲೆ

ಜಾಲತಾಣದಲ್ಲಿ ಸುಳ್ಳು ಸುದ್ದಿ

ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಯುವಕನಿಗೆ ಸೋಮವಾರ ಕರೊನಾ ಪಾಸಿಟಿವ್ ಎಂಬ ವರದಿ ಬಂದಿದೆ. ಆದರೆ, ಅದು ಸುಳ್ಳು. ಆತನ ವರದಿ ನೆಗೆಟಿವ್ ಬಂದಿದೆ ಎಂಬ ಸಂದೇಶವೊಂದು ಸೋಮವಾರ ರಾತ್ರಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಜನತೆಯಲ್ಲಿ ಗೊಂದಲ ಉಂಟು ಮಾಡಿದೆ.

ಸಂದೇಶದಲ್ಲಿ ‘ಆತನ ವರದಿ ನೆಗೆಟಿವ್ ಆಗಿದ್ದು, ಶಿವಮೊಗ್ಗ ಲ್ಯಾಬ್​ನಲ್ಲಿ ಬೇರೆ ಯಾರದೋ ವರದಿಗೆ ಈ ಯುವಕನ ಮೊಬೈಲ್ ನಂಬರ್ ಲಿಂಕ್ ಆಗಿದೆ. ಹಾಗಾಗಿ ವರದಿ ಪಾಸಿಟಿವ್ ಎಂದು ಬಂದಿದೆ. ಅದು ಸುಳ್ಳಾಗಿದ್ದು, ಮತ್ತೊಮ್ಮೆ ಆತನ ತಪಾಸಣೆ ನಡೆಸಿ ವರದಿಗಾಗಿ ಕಾಯಲಾಗುತ್ತಿದೆ’ ಎಂದು ಹೇಳಲಾಗಿದೆ. ಅಲ್ಲದೆ, ಸ್ವರ್ಣವಲ್ಲೀ ಶ್ರೀಗಳ ಹೆಸರನ್ನೂ ಇದರಲ್ಲಿ ಬಳಸಲಾಗಿದ್ದು, ‘ಶ್ರೀಗಳು ಹೇಳಿದಂತೆ ಹವ್ಯಕರಿಗೆ ಕರೊನಾ ಬಾರದಿರಲಿ ಎಂದು ಪ್ರಾರ್ಥನೆ’ ಎಂದು ಬರೆಯಲಾಗಿದೆ.

ಆದರೆ, ಈಗ ಯಾವ ಮಾದರಿಗಳನ್ನೂ ಶಿವಮೊಗ್ಗ ಲ್ಯಾಬ್​ಗೆ ಕಳುಹಿಸುತ್ತಿಲ್ಲ. ಕಾರವಾರದ ಲ್ಯಾಬ್​ನಲ್ಲಿ ತಪಾಸಣೆಯಾಗುತ್ತವೆ. ಹೀಗಿದ್ದರೂ ಯಾರೋ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಒಂದೆಡೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು, ಜತೆಗೆ ಸ್ವರ್ಣವಲ್ಲೀ ಶ್ರೀಗಳ ಹೆಸರನ್ನೂ ಬಳಸಿಕೊಂಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಜಾಲತಾಣಗಳಲ್ಲಿ ಸುಳ್ಳು ಸಂದೇಶ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಸುಳ್ಳು ಸಂದೇಶ ಕಳುಹಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.