ಶಿರಸಿ: ಜಾಲದ ಮರಗಳು ದೀರ್ಘಕಾಲ ಬಾಳುತ್ತವೆ. ಆದರೆ, ನೂರಾರು ಜಾಲದ ಮರಗಳು ನಿಗೂಢವಾಗಿ ಒಣಗಿ ಸಾವನ್ನಪ್ಪುತ್ತಿರುವ ಘಟನೆ ತಾಲೂಕಿನ ಗೋಳಿಗೊಪ್ಪ ಗ್ರಾಮದಲ್ಲಿ ನಡೆದಿದೆ.
ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿಕೊಪ್ಪ ಗ್ರಾಮ ಸ.ನಂ. 26ರಲ್ಲಿರುವ ಹಲವಾರು ಜಾಲದ ಮರಗಳು ಇತ್ತೀಚೆಗೆ ವೇಗವಾಗಿ ಒಣಗಿ ನಾಶವಾಗುತ್ತಿವೆ. ಗೋಳಿಕೊಪ್ಪದಲ್ಲಿ ಅಡಕೆ ತೋಟಕ್ಕಾಗಿ ಬಿಟ್ಟಿರುವ ಅಂದಾಜು 200 ಎಕರೆ ಸೊಪ್ಪಿನ ಬೆಟ್ಟದಲ್ಲಿ ಸಾವಿರಾರು ಜಾಲದ ಮರಗಳಿವೆ. ಇದರಲ್ಲಿ ಈಗಾಗಲೇ ನೂರಾರು ಮರಗಳು ನಿಗೂಢ ಕಾಯಿಲೆಗೆ ತುತ್ತಾಗಿ ಮೃತಪಟ್ಟಿವೆ. ಹಸಿರಾಗಿ ಹರಡಿದ್ದ ಮರಗಳು ಒಮ್ಮೆಲೆ ಬರಿದಾಗಿ ಸಾವಿಗೀಡಾಗುತ್ತಿರವುದು ಯಾಕೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಬೃಹದಾಕಾರವಾಗಿ ಬೆಳೆದು ನಿಂತಿರುವ ಮರಗಳು ಸಾಯುತ್ತಿರುವುದು ಗ್ರಾಮಸ್ಥರದಲ್ಲಿ ಆತಂಕ ಮೂಡಿಸಿದ್ದು, ಯಾವ ರೋಗದಿಂದ ಇದು ಆಗುತ್ತಿದೆ? ಇದು ಉಳಿದ ಮರಗಳಿಗೆ ಹಬ್ಬಿದಲ್ಲಿ ಏನು ಗತಿ ಎಂಬ ಭಯ ವ್ಯಕ್ತವಾಗಿದೆ. ಬೆಟ್ಟದಲ್ಲಿ ಹಲವು ಜಾತಿಯ ಮರಗಳಿದ್ದರೂ ಕೇವಲ ಜಾಲದ ಮರಗಳು ಮಾತ್ರ ಸಾಯುತ್ತಿರುವುದು ಸೋಜಿಗದ ಸಂಗತಿಯಾಗಿದೆ.
ಗೋಳಿಕೊಪ್ಪ ಭಾಗದಲ್ಲಿ ಜಾಲದ ಮರಗಳು ಅತಿ ಹೆಚ್ಚಾಗಿದ್ದು, ಮುಂದಿನ ಬೇಸಿಗೆಯ ಒಳಗೆ ಬಹುತೇಕ ಮರಗಳು ಸಾಯುವ ಹಂತಕ್ಕೆ ಬಂದು ತಲುಪುವ ಸಾಧ್ಯತೆಯಿದೆ ಎನ್ನುತ್ತಾರೆ ಸ್ಥಳೀಕರು.
ಕೃಷಿಕರ ಸೊಪ್ಪಿನ ಬೆಟ್ಟದಲ್ಲಿ ಜಾಲದ ಮರಗಳು ಹರಡಿಕೊಂಡಿದ್ದು, ಏಕಾಏಕಿ ನಾಶವಾಗುತ್ತಿವೆ. ಉತ್ತಮ ಪಿಠೋಪಕರಗಳನ್ನು ತಯಾರಿಸಲು ಈ ಮರ ಅನುಕೂಲಕರ. ಕಡಿಮೆ ಭಾರವನ್ನು ಇರುವ ಈ ಮರಗಳ ನಾಟವನ್ನು ಮಾಡಲು ಸಾಧ್ಯವಿದೆ. ಹಾಗಾಗಿ ಅರಣ್ಯ ಇಲಾಖೆ ಇದಕ್ಕೆ ಅನುಮತಿ ನೀಡಬೇಕಿದೆ. | ಎಂ.ಕೆ. ಹೆಗಡೆ, ಗೋಳಿಕೊಪ್ಪ ನಿವಾಸಿ
ಗೋಳಿಕೊಪ್ಪದಲ್ಲಿ ಒಂದೇ ಜಾತಿಯ ಮರಗಳು ಸಾಯುತ್ತಿರುವುದು ವಿಶೇಷವಾಗಿದೆ. ಈ ಹಿಂದೆ ರಾಮಪತ್ರೆ ಮರಗಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ, ಜಾಲದ ಮರಗಳ ಸಾವಿನ ನಿಖರತೆ ಸಿಗುತ್ತಿಲ್ಲ. ಇದು ನಿಸರ್ಗದ ಕ್ರಿಯೆಯಾಗಿದ್ದು, ಸೂಕ್ಷ್ಮವಾಗಿ ಗಮನಿಸಬೇಕಿದೆ. | ಶಿವಾನಂದ ಕಳವೆ, ಪರಿಸರ ತಜ್ಞ