ಹೊಳೆನರಸೀಪುರ: ಕಾಲುಬಾಯಿ, ಚರ್ಮ ಗಂಟು ರೋಗಗಳಿಗೆ ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಗ್ರಾಮೀಣ ಭಾಗದಲ್ಲಿ ಪ್ರಚಾರದ ಮೂಲಕ ಅರಿವು ಮೂಡಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು ತಿಳಿಸಿದರು.
ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪಶು ವೈದ್ಯಕೀಯ ಇಲಾಖೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಏಳನೇ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಮೂಲಕ ಅರಿವು ಮೂಡಿಸಲಾಗುವುದು. ಇವರ ಜತೆಗೆ ಪಶು ಇಲಾಖೆಯ ಸಿಬ್ಬಂದಿ ಲಸಿಕೆ ನೀಡುವ ದಿನಾಂಕ ಹಾಗೂ ಯಾವ ಹಂತದ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂಬ ಮಾಹಿತಿಯನ್ನು ಲಸಿಕೆ ಹಾಕುವ ಮುಂಚಿತವಾಗಿ ತಿಳಿಸಬೇಕು ಎಂದು ಹೇಳಿದರು.
ಕಾಲುಬಾಯಿ ರೋಗ ನಿಯಂತ್ರಣ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸಿ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳನ್ನು ರೋಗ ಮುಕ್ತಗೊಳಿಸಬೇಕೆಂದು ತಿಳಿಸಿದರು.
ತಹಸೀಲ್ದಾರ್ ರೇಣುಕುಮಾರ್ ಮಾತನಾಡಿ, ತಾಲೂಕಿನಲ್ಲಿ 74382 ಜಾನುವಾರುಗಳಿವೆ. ಸಾಂಕ್ರಾಮಿಕವಾಗಿ ಹರಡುವ ಕಾಲುಬಾಯಿ ಮತ್ತು ಚರ್ಮಗಂಟು ರೋಗಗಳಿಗೆ ಎಫ್‌ಎಂಡಿ ಮತ್ತು ಎಲ್ ಎಸ್‌ಡಿ ಲಸಿಕೆಯನ್ನು ಏಪ್ರಿಲ್ 26ರಿಂದ ಜೂನ್ 4 ರವರೆಗೆ ಹಾಕಲಾಗುತ್ತದೆ ಎಂದು ತಿಳಿಸಿದರು.
ತಾಲೂಕು ಪಶು ವೈದ್ಯಧಿಕಾರಿ ಡಾ.ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಪಶು ಇಲಾಖೆಯ ಮೂರು ತಂಡಗಳನ್ನು ಒಳಗೊಂಡ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರು ಬೆಳಗ್ಗೆ ಹಳ್ಳಿಗಳಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಜಾನುವಾರು ಸಾಕಿರುವ ಎಲ್ಲ ರೈತರು ತಮ್ಮ ದನ, ಎಮ್ಮೆ, ಕರು, ಹಂದಿ ಒಳಗೊಂಡಂತೆ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸುವ ಮೂಲಕ ರಕ್ಷಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ದಿನಕಳದಂತೆ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ರೋಗ ಹರಡಿ ಇರುವ ಜಾನುವಾರುಗಳು ಮರಣ ಹೊಂದಿದರೆ ರೈತನಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ಆದ್ದರಿಂದ ಸರ್ಕಾರ ಲಸಿಕೆ ಅಭಿಯಾನವನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದ್ದಾರೆ.
ಪಶುವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಪ್ರೋಗ್ರಾಮ್ ಮ್ಯಾನೇಜರ್ ನವೀನ್, ಪಶು ವೈದ್ಯರಾದ ನಿಧಾ, ತೇಜಸ್ವಿನಿ, ಶ್ರೇಯಸ್, ನಿಸರ್ಗಾ, ಲೀಲಾ ಹಾಗೂ ಸಿಬ್ಬಂದಿ ಹಾಜರಿದ್ದರು.