ಜಿಲ್ಲೆ

ಜಾನುವಾರುಗಳಿಗೆ ನೀರಿನ ವ್ಯವಸ್ಥೆ

ಲಕ್ಷ್ಮೇಶ್ವರ: ಲಾಕ್​ಡೌನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿನ ಬೀದಿ ಜಾನುವಾರುಗಳು ನೀರು ಮತ್ತು ಆಹಾರ ಸಿಗದೆ ಪರಿತಪಿಸುತ್ತಿರುವುದನ್ನು ಕೊಂಚ ಮಟ್ಟಿಗಾದರೂ ತಪ್ಪಿಸುವ ಉದ್ದೇಶದಿಂದ ಸಮಾನ ಮನಸ್ಕ ಗೆಳೆಯರ ಬಳಗದವರು ಸ್ವಯಂ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಪಟ್ಟಣದ ಪ್ರಮುಖ ಸ್ಥಳದಲ್ಲಿ ಸಾರ್ವಜನಿಕ ನಲ್ಲಿ ಇರುವ ಕಡೆ ಸಣ್ಣ ಸಿಮೆಂಟ್​ನ ಡೋಣಿಗಳನ್ನು ಮತ್ತು ಅಲ್ಲಿ ಒಂದಿಷ್ಟು ಹೊಟ್ಟು-ಮೇವಿನ ವ್ಯವಸ್ಥೆ ಮಾಡಿದ್ದಾರೆ. ನಿತ್ಯ ಎರಡು ಹೊತ್ತು ಇಟ್ಟಿರುವ ದೋಣಿಗೆ ನೀರು ತುಂಬಿಸುವ ಮತ್ತು ರೈತರಿಂದ ಸಂಗ್ರಹಿಸಿದ ಹೊಟ್ಟು-ಮೇವನ್ನು ಬೀದಿ ದನಗಳಿಗೆ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಸ್ವತಃ ಗೆಳೆಯರ ಬಳಗದವರೇ ಹಣ ಕೂಡಿಸಿ ಖರೀದಿಸಿರುವ ಡೋಣಿಗೆ ಸುಣ್ಣ ಬಳಿದು ಅದರ ಮೇಲೆ ‘ಪುಣ್ಯಕೋಟಿ ಉಳಿಸಿ-ಕೋಟಿ ಪುಣ್ಯ ಗಳಿಸಿ’ ಎಂದು ಬರೆದಿದ್ದಾರೆ. ಶನಿವಾರ ತಹಸೀಲ್ದಾರರು ಗೆಳೆಯರ ಬಳಗದ ಕಾರ್ಯವನ್ನು ಪರಿಶೀಲಿಸಿ, ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ವಯಂ ಸೇವಕರಾದ ಸಂತೋಷ ಬೋಮಲೆ, ಮಂಜುನಾಥ ಬೆಂಗಳೂರ, ಅರುಣ ಕಳ್ಳಿಮನಿ, ವಿಶ್ವನಾಥ ಉಳವಪ್ಪನವರ, ಚಂದ್ರು ಹುರಕಡ್ಲಿ, ಈರಣ್ಣ ಪೂಜಾರ, ಮಂಜು ಮುದಗಲ್ ಇದ್ದರು.