ಜಿಲ್ಲೆ

ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ

ಬಾಗಲಕೋಟೆ: ಬೇಸಿಗೆ ಇರುವದರಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗ ಬರುವ ಸಂಭವವಿದ್ದು, ಜಿಲ್ಲೆಯ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ನವನಗರದ ಜಿಲ್ಲಾ ಪಾಲಿಕ್ಲಿನಿಕ್‌ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆಪ್ತೋ ಎಂಬ ವೈರಾಣುವಿನಿಂದ ಬರುವ ಈ ರೋಗ ರೈತರಿಂದ ಆರ್ಥಿಕ ಸಂಕಷ್ಟ ಉಂಟು ಮಾಡುತ್ತದೆ. ಈ ರೋಗದಿಂದ ಜಾನುವಾರುಗಳನ್ನು ಮುಕ್ತಗೊಳಿಸಲು ಲಸಿಕೆ ಅವಶ್ಯವಾಗಿ ಹಾಕಿಸಬೇಕು ಎಂದರು.

ಈ ರೋಗದ ಲಕ್ಷಣ ಬಾಯಿಯಲ್ಲಿ ಹುಣ್ಣು, ಮೇವು ತಿನ್ನದೇ ಇರುವುದು, ಬಾಯಿಯಿಂದ ರಕ್ತ ಸ್ರಾವವಾಗುವುದು. ಇದು ಬಾಯಿ ಬೇಕೆ ಲಕ್ಷಣವಾದರೆ, ಕಾಲಿನ ಗೊರಸುಗಳಲ್ಲಿ ಹುಣ್ಣಾಗಿ ಕಾಲು ನೆಲಕ್ಕೆ ಉರಲಾಗದಂತಹ ಪರಿಸ್ಥಿತಿ ಬರುತ್ತದೆ. ಅದರಲ್ಲಿ ಮಿಶ್ರತಳಿ ರಾಸುಗಳಿಗೆ ಯಾವಾಗ ಬೇಕಾದರೂ ಬರಬಹುದಾಗಿದೆ. ಆದರೆ ಸ್ವದೇಶಿ ತಳಿಯ ರಾಸುಗಳಿಗೆ ಬೇಸಿಗೆಯಲ್ಲಿ ಮಾತ್ರ ಕಂಡು ಬರುತ್ತದೆ. ಈ ರೋಗದಿಂದ ಬಳಲುತ್ತಿರುವ ರಾಸುಗಳಿಂದ ರಾಸುಗಳಿಗೆ ಗಾಳಿ ನೀರಿನಿಂದ ಸೊಂಕು ಹರಡುತ್ತದೆ. ಇದರಿಂದ ಮುಕ್ತಿ ಹೊಂದಲು ಪ್ರತಿ ೬ ತಿಂಗಳಿಗೊಮ್ಮೆ ಲಸಿಕೆಯನ್ನು ಹಾಕಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಾಗೃತಿಯ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಎಚ್.ಕರಡಿಗುಡ್ಡ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಜಿ.ಬಿ.ಗುರವ, ಬಾಗಲಕೋಟೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಆರ್.ಎಸ್.ಪದರಾ, ನಿವೃತ್ತ ಉಪ ನಿರ್ದೇಶಕ ಡಾ.ವಿ.ಕೆ.ಕೋವಳ್ಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.