ಜಯಪುರ: ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ಕಾಯಿಲೆ ರೇಬಿಸ್. ವೈರಾಣು ಅತಿಸೂಕ್ಷ್ಮವಾಗಿದ್ದು, ರೇಬಿಸ್ ಸೋಂಕಿಗೆ ಒಳಗಾದ ಪ್ರಾಣಿಯ ಜೊಲ್ಲಿನಿಂದ ರೋಗ ಹರಡುತ್ತದೆ. ವೈರಾಣು ನರಮಂಡಲವನ್ನು ನಿಷ್ಕ್ರಿಯಗೊಳಿಸುತ್ತದೆ ಎಂದು ಪಶು ವೈದ್ಯಾಧಿಕಾರಿ ಡಾ. ಮಣಿಕಾಂತ್ ಹೇಳಿದರು.
ಮಂಗಳವಾರ ಪಶು ಚಿಕಿತ್ಸಾಲಯದಿಂದ ಜಾನುವಾರು ಆರೋಗ್ಯ ಶಿಬಿರ, ಬರಡು ರಾಸು ಶಿಬಿರದ ಮಾಹಿತಿ ಹಾಗೂ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರದಲ್ಲಿ ಮಾತನಾಡಿ, ರೇಬಿಸ್ ತಡೆಗೆ ಲಸಿಕೆಯೇ ಪರಿಹಾರ. ಜಾನುವಾರುಗಳಿಗೆ ಸರ್ಕಾರದಿಂದ ನೀಡುತ್ತಿರುವ ಕಾಲು-ಬಾಯಿ ರೋಗದ ಲಸಿಕೆ, ಚರ್ಮಗಂಟು ರೋಗದ ಲಸಿಕೆ, ಬ್ರುಸೆಲ್ಲಾ ರೋಗದ ಲಸಿಕೆ, ಜಂತು ನಾಶಕ ಔಷಧಗಳ ಮಹತ್ವ, ಇತರ ರೋಗಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ಜಯಪುರ ಗ್ರಾಪಂ ಅಧ್ಯಕ್ಷ ಕರುಣಾಕರ ಮಾತನಾಡಿ, ಡಾ. ಪವಿತ್ರಾ ಹಾಗೂ ಡಾ. ಮಣಿಕಾಂತ್ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ರೈತರಿಗೆ ಇನ್ನಷ್ಟು ಸಹಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷೆ ಜಯಾ ಮುರುಗೇಶ್ ಹಸುವಿಗೆ ಗೋಪೂಜೆ ಮಾಡಿದರು. ಜಾನುವಾರುಗಳಿಗೆ ಜಂತುನಾಶಕ ಔಷಧ ಹಾಕಲಾಯಿತು. 34 ಶ್ವಾನಗಳಿಗೆ ಲಸಿಕೆ ಹಾಗೂ ಜಂತುನಾಶಕ ಔಷಧ ನೀಡಲಾಯಿತು. ಕಿರಿಯ ಪಶುವೈದ್ಯಕೀಯ ಪರೀಕ್ಷಕಿ ಶ್ವೇತಾ, ಸಿಬ್ಬಂದಿ ಮಧುಸೂದನ, ಪಶುಚಿಕಿತ್ಸಾಲಯ ಬಸ್ರೀಕಟ್ಟೆಯ ರಾಕೇಶ್ ಇದ್ದರು.