ಹಾಸನ: ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಸುದ್ದಿ ತಿಳಿದು ಪೊಲೀಸರು ಬೆನ್ನು ಹತ್ತಿದ ಕಂಟೈನರ್ ವೇಗವಾಗಿ ಹೋಗಿ ನಿಯಂತ್ರಣ ತಪ್ಪಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಂಟೈನರ್‌ನಲ್ಲಿ ತುಂಬಿದ್ದ 40 ಜಾನುವಾರುಗಳಲ್ಲಿ 7 ಜಾನುವಾರುಗಳು ಅಸುನೀಗಿರುವ ಘಟನೆ ಎನ್‌ಎಚ್ 75 ಬ್ಯಾಡರಹಳ್ಳಿ ಗ್ರಾಮದ ತಿರುವಿನಲ್ಲಿ ಬುಧವಾರ ಜಾವ ನಡೆದಿದೆ.
ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹಿರೀಸಾವೆ ಪೊಲೀಸರಿಗೆ ತಿಳಿದು ಬಂದ ಬಳಿಕ ಪಿಎಸ್ ಚಂದ್ರಶೇಖರ್ ಮತ್ತು ಅವರ ತಂಡ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ವಾಹನವನ್ನು ಹಿರೀಸಾವೆ ಸಮೀಪ ತಡೆಯಲು ಯತ್ನಿಸಿದೆ. ಆದರೆ ಚಾಲಕ ವಾಹನ ನಿಲ್ಲಿಸದೆ, ಅತಿವೇಗವಾಗಿ ಕಂಟೈನರ್ ಚಲಾಯಿಸಿಕೊಂಡು ಹೋಗಿದ್ದಾನೆ. ನಂತರ ಬ್ಯಾಡರಹಳ್ಳಿ ಗ್ರಾಮದ ತಿರುವಿನಲ್ಲಿ ವಾಹನ ನಿಯಂತ್ರಣಕ್ಕೆ ಸಿಗದೆ, ರಸ್ತೆ ಪಕ್ಕದ ಲಕ್ಷ್ಮಣಗೌಡ ಎಂಬುವವರ ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದಿದೆ. ಲಾರಿಯ ಚಾಲಕ ಮತ್ತು ಮತ್ತೊಬ್ಬ ಕತ್ತಲೆಯಲ್ಲಿ ಓಡಿಹೋಗಿದ್ದಾರೆ.
ಕಂಟೇನರ್‌ನಲ್ಲಿ 40 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಲಾರಿ ಡಿಕ್ಕಿಯಾಗಿ ಉರುಳಿಬಿದ್ದ ಪರಿಣಾಮ ಅದರಲ್ಲಿ 7 ದನಗಳು ಮೃತಪಟ್ಟಿವೆ. ಉಳಿದ 33 ಜಾನುವಾರುಗಳನ್ನು ವೈದ್ಯಕೀಯ ತಪಾಸಣೆ ನಡೆಸಿ ಕಡೂರಿನ ಸರ್ಕಾರಿ ಗೋ ಶಾಲೆಗೆ ಬಿಡಲಾಗಿದೆ. ಲಾರಿ ಮಾಲೀಕ ಸೇರಿದಂತೆ 3 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಮೂವರ ಮೇಲೆ ಪ್ರಕರಣ ದಾಖಲು: ಎಸ್‌ಪಿ
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಹಿರಿಸಾವೇ ಪೊಲೀಸ್ ಠಾಣೆ ಪಿಎಸ್ ಚಂದ್ರಶೇಖರ್ ಮತ್ತು ಸಿಬ್ಬಂದಿ ದನಗಳನ್ನು ಸಾಗಿಸುತ್ತಿದ್ದ ಕಂಟೈನರ್ ವಾಹನ ತಡೆಯಲು ಯತ್ನಿಸಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿ ವೇಗವಾಗಿ ಚಲಾಯಿಸುತ್ತಿದ್ದ ವಾಹನ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಒಟ್ಟು ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.