ಔರಾದ್: ಪ್ರಾಮಾಣಿಕ ಕೃಷಿಕನಿಗೆ ಹಾಗೂ ಜಾನುವಾರು ಸಾಗಾಣಿಕೆದಾರರಿಗೆ ತೊಂದರೆ ಆಗಬಾರದು. ಸರ್ಕಾರದ ನಿಯಮ ಉಲ್ಲಂಘನೆ ಆಗಬಾರದು. ಇದಕ್ಕೆ ಎಲ್ಲ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಪಿಎಸ್‌ಐ ಉಪೇಂದ್ರಕುಮಾರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂತೆ ಆಯೋಜಕರು, ಜಾನುವಾರು ಖರೀದಿದಾರರು, ಮಾರಾಟಗಾರರ ಶಾಂತಿ ಸಭೆಯಲ್ಲಿ ಮಾತನಾಡಿ, ಜಾನುವಾರು ಖರೀದಿ, ಮಾರಾಟ, ಸಾಗಾಣಿಕೆಯಲ್ಲಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಾನುವಾರು ಖರೀದಿಯ ರಸೀದಿ ಪಡೆಯಬೇಕು. ಸಾಗಣೆಗೆ ಪಶು ಇಲಾಖೆಯಿಂದ ಆರೋಗ್ಯ ತಪಾಸಣೆ ಮಾಡಿಸುವುದು ಕಡ್ಡಾಯ ಎಂದರು.
೧೫ ಕಿ.ಮೀ.ಗಿಂತ ದೂರ ಸಾಗಿಸಲು ಪಶು ವೈದ್ಯರಿಂದ ಪ್ರಮಾಣ ಪತ್ರ ಪಡೆಯಬೇಕು. ಔರಾದ್ ಸಂತೆಯಲ್ಲಿ ಸರ್ಕಾರದ ನಿಯಮ ಪಾಲಿಸುತ್ತಿಲ್ಲ ಎಂಬ ದೂರುಗಳಿವೆ. ಇನ್ಮುಂದೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಸೀದಿ ಇಲ್ಲದೆ ಜಾನುವಾರು ಸಾಗಣೆಗೆ ಅಧಿಕಾರಿಗಳು ಅವಕಾಶ ನೀಡಬಾರದು. ರಸೀದಿ ಪಡೆಯದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಬೇಕು. ಖರೀದಿ ಮತ್ತು ಮಾರಾಟಗಾರರ ಮಧ್ಯೆ ತಕರಾರು ಮಾಡುವಂತಿಲ್ಲ. ಪ್ರತಿ ಸೋಮವಾರ ನಡೆಯುವ ಜಾನುವಾರು ಸಂತೆಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ರೈತರಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಉಪಾಧ್ಯಕ್ಷ ಸಂದೀಪ ಪಾಟೀಲ್, ಕಾರ್ಯದರ್ಶಿ ಸಂತೋಷಕುಮಾರ, ಪಶು ಪರೀಕ್ಷಕ ಗಂಗಾರೆಡ್ಡಿ, ಎಪಿಎಂಸಿ ಸದಸ್ಯರು, ಸಂತೆ ಆಯೋಜಕರು, ಮಾರಾಟಗಾರರು, ಖರೀದಿದಾರರು ಇದ್ದರು.