ಚಿಕ್ಕಬಳ್ಳಾಪುರ: ಇತ್ತೀಚೆಗೆ ಜಿಲ್ಲೆಯ ಮಂಚೇನಹಳ್ಳಿ, ಗೌರಿಬಿದನೂರು ಮತ್ತು ಚಿಂತಾಮಣಿ ಸೇರಿ ವಿವಿಧೆಡೆ ಅನಧಿಕೃತವಾಗಿ ಜಾನುವಾರುಗಳ ಸಾಗಣೆ ಪ್ರಕರಣಗಳ ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಅಲಾರ್ಟ್ ಆಗಿರುವ ಜಿಲ್ಲಾಡಳಿತ, ಅಕ್ರಮ ಸಾಗಣೆಗೆ ಹಾಗೂ ಗೋ ಹತ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಜು.21ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಅನಧಿಕೃತವಾಗಿ ಗೋವು, ಕರುಗಳು, ಒಂಟೆಗಳು ಮತ್ತು ಇತರ ಜಾನುವಾರುಗಳನ್ನು ಅಕ್ರಮ ಸಾಗಣೆ ಹಾಗೂ ವಧೆ ಮಾಡುವ ಸಾಧ್ಯತೆಯಿದ್ದು. ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಜ್ಯದಲ್ಲಿ ಗೋ ಹತ್ಯೆ ಸಂಪೂರ್ಣ ನಿಷೇಧವಾಗಿದ್ದು, ಎಮ್ಮೆ ಹಾಗೂ ಕೋಣಗಳಿಗೆ ಮಾತ್ರ 13 ವರ್ಷ ವಯಸ್ಸಾದ ಬಳಿಕ ವಧೆ ಮಾಡಬಹುದು ಎಂಬ ಹೊಸ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಆಕ್ರಮ ಸಾಗಣೆ ಹಾಗೂ ವಧೆ ಮಾಡುವುದನ್ನು ತಡೆಯಲು ಗಡಿಭಾಗಗಳ ಚೆಕ್ ಪೋಸ್ಟ್‌ನಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಜರುಗಿಸುವಂತೆ ಸೂಚಿಸಿದರು.
ನಗರಸಭೆ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಾಣಿ ವಧೆಗೆ ಅನುಮತಿ ನೀಡದಂತೆ ಎಚ್ಚರ ವಹಿಸಬೇಕಿದೆ, ಒಂದೊಮ್ಮೆ ಪ್ರಕರಣಗಳು ಕಂಡುಬಂದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ರಡಿ ಪ್ರಕರಣ ದಾಖಲಿಸಬೇಕು ಎಂದು
ಗಡಿಯಲ್ಲಿ ಜಾಗ್ರತೆ: ಜಿಲ್ಲೆಯು ಆಂಧ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಗಡಿ ಭಾಗಗಳ ಮೂಲಕ ಜಾನುವಾರುಗಳ ಸಾಗಣೆ ನಡೆಯುವ ಸಾಧ್ಯತೆ ಇದೆ. ಆಂಧ್ರದಲ್ಲಿ ಗೋಹತ್ಯೆ ನಿಷೀಧ ಕಾಯ್ದೆ ಜಾರಿಗೊಂಡಿಲ್ಲ. ಹಾಗಾಗಿ ಅಲ್ಲಿ ಪ್ರಾಣಿ ವಧೆಗೆ ಯಾವುದೇ ಅಡ್ಡಿಗಳು ಇಲ್ಲ, ಇದರಿಂದ ಜಿಲ್ಲೆಯ ಗಡಿ ಭಾಗಗಳ ಮೂಲಕ ಈ ಭಾಗಕ್ಕೆ ಆಗಮಿಸುವವರ ಬಗ್ಗೆ ಎಚ್ಚರ ವಹಿಸಬೇಕು. ಜಿಲ್ಲೆಯೊಳಗೆ ಬರುವ ಲಾರಿ, ಕಂಟೈನರ್, ಟೆಂಪೋ ಹಾಗೂ ಗೂಡ್ಸ್ ವಾಹನಗಳ ತಪಾಸಣೆ ಮಾಡುವ ಜತೆಗೆ ಪ್ರಾಣಿ ವಧೆ ಮಾಡದಂತೆ ಜಾಗೃತಿ ಮೂಡಿಸಬೇಕೆಂದು ಅಮರೇಶ್ ಸೂಚಿಸಿದರು.