ನೆಲಮಂಗಲ: ರೈತ ಕುಟುಂಬಗಳ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸುವ ಜಾನುವಾರುಗಳ ರಕ್ಷಣೆ ಎಲ್ಲರ ಕರ್ತವ್ಯ ಆಗಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ನಗರದ ಪಶು ಆಸ್ಪತ್ರೆ ಆವರಣದಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಜಾನುವಾರ ರೋಗ ನಿಯಂತ್ರಣ ಕಾರ್ಯಕ್ರಮದಡಿ ಆಯೋಜಿಸಿದ್ದ ಕಾಲುಬಾಯಿ ಸೋಂಕು ತಡೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
2004ರಿಂದ ಪ್ರತಿ ವರ್ಷ ಕಾಲುಬಾಯಿ ರೋಗದ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಜಾನುವಾರು ನಂಬಿಕೊಂಡು ತಾಲೂಕಿನಾದ್ಯಂತ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ. ಕಾಲುಬಾಯಿ ರೋಗ ಕುರಿತು ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಜಾನುವಾರುಗಳಿಗೆ ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರ ಗಮನಕ್ಕೆ ತರಬೇಕು. ಕಾಲುಬಾಯಿ ರೋಗಮುಕ್ತ ತಾಲೂಕು ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಪಶು ಸಂಗೋಪನಾ ಇಲಾಖೆ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಜಿ.ಎಂ.ನಾಗರಾಜು ಮಾತನಾಡಿ, ಕಾಲುಬಾಯಿ ರೋಗ ವೈರಸ್‌ನಿಂದ ಬರುವ ಕಾಯಿಲೆಯಾಗಿದ್ದು, ಸಾವಿನ ಪ್ರಮಾಣ ಕಡಿಮೆ. ಆದರೆ ರೋಗ ಬಂದರೆ ಹಾಲಿನ ಇಳುವರಿ ಕಡಿಮೆಯಾಗಲಿದೆ. ಹಾಗೆಯೇ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಈ ರೋಗಕ್ಕೆ ಜಿಲ್ಲೆಯಲ್ಲಿ 10 ಹಸುಗಳು ಮರಣ ಹೊಂದಿವೆ ಎಂದರು.
ನೆಲಮಂಗಲ ತಾಲೂಕಿನಾದ್ಯಂತ 44 ಸಾವಿರ ರಾಸುಗಳಿದ್ದು, 6 ವಾಹನದಲ್ಲಿ 38 ಸಿಬ್ಬಂದಿಯ 6 ವಿಶೇಷ ತಂಡದ ಸದಸ್ಯರು ಲಸಿಕೆ ನೀಡುತ್ತಿದ್ದು, 17 ಮಂದಿ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಎಚ್.ಸಿದ್ದಪ್ಪ ತಿಳಿಸಿದರು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಗೋಪೂಜೆ ನೆರವೇರಿಸಿ, 10ಕ್ಕೂ ಹೆಚ್ಚು ಮಂದಿ ರೈತರಿಗೆ ಪಶು ಆಹಾರ ವಿತರಿಸಿದರು.
ತಾಪಂ ಕಾರ್ಯನಿರ್ವಾಹಣಾಧಿಕಾರಿ ಮೋಹನ್‌ಕುಮಾರ್, ನಗರಸಭೆ ಪೌರಾಯುಕ್ತ ಮಂಜುನಾಥ್, ಮುಖಂಡರಾದ ಮಾರೇಗೌಡ, ಮುನಿಯಪ್ಪ, ನರಸಿಂಹಮೂರ್ತಿ, ಸಂಚಾರಿ ಪಶುವೈದ್ಯಾಧಿಕಾರಿ ಎಲ್.ಕೆ.ಜಯರಾಮಯ್ಯ, ಮುಖ್ಯ ಪಶು ವೈದ್ಯಾಧಿಕಾರಿಗಳಾದ ಮೋಹನ್‌ಕುಮಾರ್, ಶಿವಪ್ರಸಾದ್, ನಾಗರಾಜು, ಚಂದ್ರನಾಯ್ಕ, ನಿಶಾಂತ್, ದಿವ್ಯಾ ಮತ್ತಿತರರಿದ್ದರು.
ಡಿ.5ರವರೆಗೆ ಅಭಿಯಾನ: ನ.8ರಿಂದ ಡಿ.5ರವರೆಗೂ ಜಿಲ್ಲೆಯಾದ್ಯಂತ 1.82 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಂಡಿದ್ದು, ಬೆಂಗಳೂರು ಹಾಲು ಒಕ್ಕೂಟದಿಂದ 38 ವಾಹನಗಳ ವ್ಯವಸ್ಥೆ ಹಾಗೂ 38 ವಿಶೇಷ ತಂಡಗಳ ಮೂಲಕ ನಿತ್ಯ ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೂ ಲಸಿಕೆ ನೀಡಲಾಗುತ್ತಿದೆ ಎಂದು ಪಶುಸಂಗೋಪಾನ ಇಲಾಖೆ ಉಪನಿರ್ದೆಶಕ ಮಾಹಿತಿ ನೀಡಿದರು.