ಚನ್ನರಾಯಪಟ್ಟಣ: ಜಾನುವಾರು ತ್ಯಾಜ್ಯವನ್ನು ಮೌಲ್ಯವರ್ಧಿಸಿ ಕಂಪೋಸ್ಟ್ ಗೊಬ್ಬರ, ಜೈವಿಕ ಗೊಬ್ಬರ ಹಾಗೂ ಪಂಚಗವ್ಯ ತಯಾರಿಕೆ ಮಾಡುವುದರಿಂದ ರೈತರು ಹೆಚ್ಚಿನ ಯಶಸ್ಸು ಗಳಿಸಬಹುದು ಎಂದು ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಪಿ.ಚೇತನ್ ಹೇಳಿದರು.
ತಾಲೂಕಿನ ಬೆಕ್ಕ ಗ್ರಾಮದ ಪ್ರಗತಿಪರ ರೈತ ರಾಘವೇಂದ್ರ ಅವರ ತೋಟದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ, ಹಾಸನ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇವರ ಸಹಯೋಗದಲ್ಲಿ ತರಕಾರಿ ಕೃಷಿಯಲ್ಲಿ ಜಾನುವಾರು ತ್ಯಾಜ್ಯಗಳ ಸಮರ್ಪಕ ಬಳಕೆಯ ಕುರಿತಾಗಿ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಕರು ಕೃಷಿಯ ಜೊತೆಗೆ ಪಶು ಪಾಲನೆ ಮಾಡುವುದರಿಂದ ಸಾವಯವ ಕೃಷಿಗೆ ಬೇಕಾದ ಅಗತ್ಯ ಸಾವಯುವ ಗೊಬ್ಬರವನ್ನು ಸಗಣಿ ಮತ್ತು ಗಂಜಲದಿಂದ ಪಡೆಯಬಹುದಾಗಿದೆ ಎಂದರು.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ಸಂಶೋಧಕ ಡಾ.ಆರ್.ಸಂಥಿಲ್‌ಕುಮಾರ್ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರೈತರಿಗೆ ವಿವಿಧ ಹಣ್ಣಿನ ಬೆಳೆಗಳಾದ ಡ್ಯಾಗನ್ ಪ್ರೂಟ್, ಬೆಣ್ಣೆಹಣ್ಣು ಸೇರಿದಂತೆ ಇನ್ನೀತರೆ ಹಣ್ಣುಗಳನ್ನು ಬೆಳೆಯುವ ತಾಂತ್ರಿಕತೆಯನ್ನು ವಿವರಿಸಿದರು.
ಪ್ರಧಾನ ಸಂಶೋಧಕರಾದ ಡಾ.ಬಿ.ಶಂಕರ್, ರವರು ಭಾರತೀಯ ತೋಟಗಾರಿಕೆ ಸಂಸ್ಥೆಯಿಂದ ಅಭಿವೃದ್ಧಿಪಡಿಸಿದ ಹತ್ತಕ್ಕೂ ಹೆಚ್ಚು ವಿವಿಧ ತರಕಾರಿ ಬೀಜಗಳನ್ನು ರೈತರಿಗೆ ಪರಿಚಯಿಸುವುದರ ಜೊತೆಗೆ ರೈತರಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಸಿಗುವ ಲಭ್ಯತೆಯನ್ನು ಐಐಎಚ್‌ಆರ್ ನಿಂದ ಪಡೆಯವಂತೆ ಸಲಹೆ ನೀಡಿದರು.
ಸಾವಯವ ಕೃಷಿಕ, ಪ್ರಗತಿಪರ ರೈತ ಬೆಕ್ಕ ರಾಘವೇಂದ್ರರವರ ತೋಟದಲ್ಲಿ ನಡೆದ ತರಬೇತಿ ಕಾರ್ಯಕ್ರಮಕ್ಕೆ ಬೆಕ್ಕ, ಮಂಚೇನಹಳ್ಳಿ, ಬಿ.ಚೋಳೇನಹಳ್ಳಿ, ಪರಮ ಹಾಗೂ ಸುತ್ತಮುತ್ತಲಿನ 60ಕ್ಕೂ ಹೆಚ್ಚು ರೈತರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು.
ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಹೇಮಂತ್‌ಗೌಡ ಅಗತ್ಯವಿರುವ ಕಾನೂನಾತ್ಮಕ ಪ್ರಮಾಣೀಕರಣ ದೃಢೀಕರಣವನ್ನು (ಪಾರ್ಟಿಸಿಪೇಟರಿ ಗ್ಯಾರಂಟಿ ಸಿಸ್ಟಂ) ಪಡೆಯುವುದರ ಬಗ್ಗೆ ವಿವರವಾಗಿ ತಿಳಿಸಿದರು.
ಸಾವಯವ ಕೃಷಿಕ ರಾಘವೇಂದ್ರರವರು, ರೈತರಿಗೆ ಸಾವಯವ ಕೃಷಿಯ ಅಗತ್ಯವನ್ನು ಮನಗಾಣಿಸಿ, ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ತಲಾ ಒಂದು ಹಣ್ಣಿನ ಗಿಡ ಹಾಗೂ ಹಲವಾರು ತರಕಾರಿ ಬೀಜಗಳನ್ನು ವಿತರಿಸಿದದರು. ಗ್ರಾಮಸ್ಥರು ಇದ್ದರು.