ಜಿಲ್ಲೆ

ಜಾನುವಾರು ಗಣತಿ ಶೀಘ್ರ ಪೂರ್ಣ

ಚಾಮರಾಜನಗರ: ದೇಶದಲ್ಲೇ ಏಕಕಾಲದಲ್ಲಿ ನಡೆಯುತ್ತಿರುವ 21ನೇ ಜಾನುವಾರು ಗಣತಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಜಿಲ್ಲೆಯಲ್ಲಿ ಸುಮಾರು 2.54 ಲಕ್ಷ ಮನೆಗಳಲ್ಲಿ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ.

ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 70945, ಗುಂಡ್ಲುಪೇಟೆ 49842, ಕೊಳ್ಳೇಗಾಲ 31078, ಹನೂರು 40403 ಹಾಗೂ ಯಳಂದೂರು 18191 ಮನೆಗಳನ್ನು ಒಳಗೊಂಡಂತೆ ಒಟ್ಟು 2,10,459 ಗ್ರಾಮೀಣ ಪ್ರದೇಶದಲ್ಲಿರುವ ಮನೆಗಳಲ್ಲಿ ಸರ್ವೇ ಕಾರ್ಯ ನಡೆಸಲಾಗಿದೆ. ಮನೆಗಳ ಮಾಲೀಕರ ಬಳಿ ಇರುವ ಎತ್ತು, ಹಸು, ಎಮ್ಮೆ, ಕೋಣ, ಕುದುರೆ, ಕತ್ತೆ, ನಾಯಿ, ಹಂದಿ, ಕುರಿ, ಮೇಕೆ, ಮೊಲ, ಕೋಳಿಗಳು, ಬಾತು ಕೋಳಿಗಳು ಹಾಗೂ ಆಸ್ಟ್ರೀಚ್ ಪಕ್ಷಿಗಳ ವಿವರಗಳನ್ನು ಜಾನುವಾರು ಗಣತಿಯಲ್ಲಿ ದಾಖಲೀಕರಣ ಮಾಡುತ್ತಿದ್ದಾರೆ.

ಪಶುಸಂಗೋಪನಾ ಇಲಾಖೆ ನೇಮಿಸಿರುವ ಗಣತಿದಾರರು ಪ್ರತಿಯೊಂದು ಮನೆಗಳಿಗೂ ಕಡ್ಡಾಯವಾಗಿ ಭೇಟಿ ನೀಡಿ, ಆ ಮನೆಯಲ್ಲಿ ಯಾವ ತಳಿಯ ಜಾನುವಾರುಗಳು ಇದೆ? ಅದರ ವಯಸ್ಸು ಎಷ್ಟು? ಪುರುಷ ಮತ್ತು ಮಹಿಳಾ ರೈತರ ಸಂಖ್ಯೆ ಎಷ್ಟು? ಯಾವ ವರ್ಗದ ರೈತರು ಇದ್ದಾರೆ ಹಾಗೂ ಇನ್ನೂ ಇತ್ಯಾದಿ ಮಾಹಿತಿಗಳನ್ನು ದಾಖಲಿಸಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ವೇಗವಾಗಿ ಗಣತಿಕಾರ್ಯ ನಡೆದಿದ್ದರೇ, ಕಾಡಂಚಿನ ಗ್ರಾಮಗಳು ಹಾಗೂ ಅರಣ್ಯದ ಒಳ ಭಾಗದಲ್ಲಿರುವ ಗ್ರಾಮಗಳಲ್ಲಿ ಗಣತಿ ಕಾರ್ಯ ವಿವಿಧ ಕಾರಣಗಳಿಂದ ವಿಳಂಬವಾಗಿದೆ. ಶೀಘ್ರದಲ್ಲೇ ಜಿಲ್ಲೆಯಲ್ಲಿ ಗಣತಿ ಕಾರ್ಯ ಮುಕ್ತಾವಾಗಲಿದ್ದು, ಈ ಜಾನುವಾರು ಗಣತಿಯ ಆಧಾರದಲ್ಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಹನುಮೇಗೌಡ ವಿಜಯವಾಣಿಗೆ ಮಾಹಿತಿ ನೀಡಿದರು.

ಶೇ.98 ರಷ್ಟು ಗಣತಿ ಪೂರ್ಣ:

ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ತಾಲೂಕಿನ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಈಗಾಗಲೇ ಗಣತಿ ಕಾರ್ಯ ಮುಕ್ತಾಯಗೊಂಡಿದ್ದು, ಚಾಮರಾಜನಗರ ಮತ್ತು ಹನೂರು ಗ್ರಾಮೀಣ ಭಾಗದಲ್ಲಿ ಇನ್ನು 7-8 ದಿನಗಳಲ್ಲಿ ಗಣತಿ ಕಾರ್ಯ ಮುಗಿಯಲಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಈ ವರೆಗೆ ಶೇ.98 ರಷ್ಟು ಗಣತಿ ಪೂರ್ಣಗೊಂಡಿದೆ. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 15593, ಕೊಳ್ಳೇಗಾಲ ನಗರಸಭೆ 17465, ಗುಂಡ್ಲುಪೇಟೆ ಪುರಸಭೆ 7863, ಹನೂರು ಪಟ್ಟಣ ಪಂಚಾಯಿತಿ 941 ಹಾಗೂ ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2295 ಮನೆಗಳನ್ನು ಒಳಗೊಂಡಂತೆ ಒಟ್ಟು 44157 ಮನೆಗಳಲ್ಲಿ ಜಾನುವಾರು ಗಣತಿ ಕಾರ್ಯ ಮುಕ್ತಾಯಗೊಂಡಿದೆ.

ಕಾಡಂಚಿನ ಗ್ರಾಮಗಳಲ್ಲಿ ವಿಳಂಬ:

ಜಿಲ್ಲೆಯ ಕಾಡಂಚಿನ ಗ್ರಾಮಗಳು ಹಾಗೂ ಅರಣ್ಯ ಪ್ರದೇಶದ ಒಳಗೆ ಇರುವ ಗ್ರಾಮಗಳಲ್ಲಿ ಮಾತ್ರ ಜಾನುವಾರು ಗಣತಿ ವಿಳಂಬವಾಗುತ್ತಿದೆ. ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಲ್ಲಿ ಗಣತಿ ಕಾರ್ಯ ಮುಕ್ತಾಯಗೊಂಡಿದೆ. ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹಾಗೂ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯ ಅರಣ್ಯದ ಒಳಗಿರುವ ಗ್ರಾಮಗಳಲ್ಲಿ ಜಾನುವಾರು ಗಣತಿ ಮಾಡಲು ಅರಣ್ಯ ಇಲಾಖೆಯಿಂದ ವಾಹನಗಳ ವ್ಯವಸ್ಥೆ ಮಾಡಿಕೊಡುವಂತೆ ಕೋರಲಾಗಿತ್ತು. ಇತ್ತೀಚಿಗೆ ವಾಹನ ವ್ಯವಸ್ಥೆ ಮಾಡಿದ್ದು, 25 ಸಿಬ್ಬಂದಿಗಳ ತಂಡ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಒಂದು ವಾರದಲ್ಲಿ ಸಂಪೂರ್ಣ ಗಣತಿ ಕಾರ್ಯ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೊಬೈಲ್ ಆಫ್ ಮೂಲಕ ಗಣತಿ:

ಜಿಲ್ಲೆಯಲ್ಲಿ ನಡೆಯುತ್ತಿರುವ 21 ನೇ ಜಾನುವಾರು ಗಣತಿಯನ್ನು ಇದೇ ಮೊದಲ ಬಾರಿಗೆ ಮೊಬೈಲ್ ಆಫ್ ಮೂಲಕ ನಡೆಸಲಾಗುತ್ತಿದೆ. ಸ್ಮಾರ್ಟ್ ಫೋನ್‌ಗಳಲ್ಲಿ ಟ್ವೆಂಟಿಫಸ್ಟ್ ಲೈವ್ ಸ್ಟಾಕ್ ಸೆನ್ಸಸ್ ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಸರ್ವೇ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಕರಾರುವಕ್ಕಾದ ಜಾನುವಾರುಗಳ ಮಾಹಿತಿ ಲಭ್ಯವಾಗಲಿದೆ. ಈ ಹಿಂದೆ ಜಾನುವಾರುಗಳ ಗಣತಿಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತಿತ್ತು, ಆದರೇ ಜಿಪಿಎಸ್ ಮೂಲಕ ಸ್ಥಳಕ್ಕೆ ಹೋಗಿ ಗಣತಿ ಮಾಡುವುದರಿಂದ ನಿಖರ ಮಾಹಿತಿ ಲಭ್ಯವಾಗಲಿದೆ. ವಿಶೇಷವಾಗಿ ಮೊಬೈಲ್ ಗಣತಿಯಲ್ಲಿ ಗಣತಿದಾರರ ಚಲನವಲನಗಳು ಕೂಡ ದಾಖಲಾಗುವುದರಿಂದ ಖಚಿತವಾದ ಜಾನುವಾರು ಗಣತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

21 ನೇ ಜಾನುವಾರು ಗಣತಿಯಲ್ಲಿ ಮೊಬೈಲ್ ಆ್ಯ್ ಮೂಲಕ ನಿಖರವಾಗಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಮನೆಯನ್ನು ಬಿಡದೆಯೇ ಸಂಪೂರ್ಣವಾಗಿ ಗಣತಿ ಕಾರ್ಯ ಮಾಡುತ್ತಿದ್ದೇವೆ. ಕಾಡಂಚಿನ ಗ್ರಾಮಗಳಲ್ಲಿ ಗಣತಿ ಕಾರ್ಯ ವಿಳಂಬವಾಗಿದೆ. ಅದಾಗ್ಯೂ ಮಾ.31 ರೊಳಗೆ ಗಣತಿ ಕಾರ್ಯ ಮುಕ್ತಾಯವಾಗಲಿದೆ.

-ಡಾ.ಎಲ್.ಹನುಮೇಗೌಡ, ಉಪ ನಿರ್ದೇಶಕ, ಪಶು ಸಂಗೋಪನಾ ಇಲಾಖೆ, ಚಾಮರಾಜನಗರ