ಹಾಸನ: ಜಿಲ್ಲೆಯಲ್ಲಿ ಸೆ.26 ರಿಂದ ಅ.25 ರವರೆಗೆ ನಡೆಯುವ ಕಾಲು ಬಾಯಿ ರೋಗದ 4 ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಯಾವುದೇ ಜಾನುವಾರಿಗೆ ಲಸಿಕೆ ತಪ್ಪದಂತೆ ನಿಗಾವಹಿಸಿ ಲಸಿಕೆ ನೀಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ನಡೆಯುವ ಲಸಿಕಾ ಅಭಿಯಾನದ ಹಿನ್ನಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೂಕ ಪ್ರಾಣಿಗಳ ಮೇಲೆ ದಯೆ, ಕರುಣೆ ಜೊತೆಗೆ ಅವುಗಳ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತೆವಹಿಸಿ ಲಸಿಕೆ ನೀಡಲು ಹೆಚ್ಚಿನ ಪ್ರಚಾರ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಎಂದರು.
ಜಾನುವಾರುಗಳಿಗೆ ಲಸಿಕೆ ಹಾಕುವುದನ್ನು ಉದಾಸಿನ ಮಾಡಿದರೆ ಆಗುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ ಇದರಿಂದ ಜಾನುವಾರು ಸಾಕಾಣಿಕೆದಾರರಿಗೆ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಎಚ್ಚರವಹಿಸಬೇಕು. ಜಿಲ್ಲೆಯೊಂದರಲ್ಲಿಯೇ ಪ್ರತಿ ನಿತ್ಯ 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಸದರಿ ಜಾನುವಾರುಗಳ ಆರೋಗ್ಯವನ್ನು ಕಾಪಾಡುವುದು ನಿಮ್ಮ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ವರ್ಷಕ್ಕೋಮ್ಮೆ ನೀಡುವ ಈ ಲಸಿಕೆಯನ್ನು ಜಿಲ್ಲೆಯಲ್ಲಿ 20 ನೇ ಗಣತಿಯನ್ವಯ ಇರುವ 6,56,156 ಜಾನುವಾರುಗಳಿಗೂ ಲಸಿಕೆ ತಪ್ಪದಂತೆ ನಿಗವಹಿಸಬೇಕು ಎಂದು ಸೂಚಿಸಿದರು.
ಜಾನುವಾರು ಸಾಕಾಣಿಕೆದಾರರಿಗೆ ಲಸಿಕೆ ಅಭಿಯಾನದ ಬಗ್ಗೆ ಅರಿವು ಮೂಡಿಸಲು ಆಕಾಶವಾಣಿ ಮೂಲಕ ಮಾಹಿತಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು ಗ್ರಾಮೀಣ ಪ್ರದೇಶದಲ್ಲಿ ಟಾಂ ಟಾಂ ಮಾಡಿಸುವಂತೆ ತಿಳಿಸಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರಮೇಶ್, ಜಿಲ್ಲಾ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಎಂ.ಸಿ.ಡಾ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು