ಜಿಲ್ಲೆ

ಜಾನುವಾರಗಳ ಸಾಗಣೆ: ಓರ್ವನ ಬಂಧನ, ಮೂವರು ಪರಾರಿ

ಹಾಸನ: ದಾರಿಯಲ್ಲಿ ಸಿಕ್ಕ ಜಾನುವಾರುಗಳನ್ನು ಕದ್ದು ವಾಹನದಲ್ಲಿ ತುಂಬಿಕೊಂಡು ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಗುರುವಾರ ಬೆಳಗ್ಗೆ ಬಂಧಿಸಿ, ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಇದೇ ವೇಳೆ 20 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಮಚಿಕ್ಕಕಂದ ಗ್ರಾಮದ ಚೇತನ್ (28) ಬಂಧಿತ ಆರೋಪಿ. ಉಳಿದ ಆರೋಪಿಗಳಾದ ಅರಕಲಗೂಡು ತಾಲೂಕಿನ ಮಾಚಗೌಡನಹಳ್ಳಿ ಗ್ರಾಮದ ಸಮೀರ್, ನಾಸಿರ್, ಕಣಿಯಾರು ಗ್ರಾಮದ ನಾಗೇಶ ದಾಳಿ ವೇಳೆ ಪರಾರಿಯಾಗಿದ್ದಾರೆ.

ಗುರುವಾರ ಬೆಳಗ್ಗೆ 5.30ರ ಸಮಯದಲ್ಲಿ ಅಗಲಹಟ್ಟಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ಎರಡು ಗೂಡ್ಸ್ ವಾಹನಗಳಲ್ಲಿ ದಾರಿಯಲ್ಲಿ ಸಿಕ್ಕ ಜಾನುವಾರುಗಳನ್ನು ತುಂಬಿಕೊಂಡು ಸಾಗಣೆ ಮಾಡುತ್ತಿದ್ದ ವಾಹನಗಳ ಮೇಲೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಖತೀಜಾ ಅವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದಾರೆ. ಈ ವೇಳೆ ಚೇತನ್ ಸಿಕ್ಕಿಬಿದ್ದಿದ್ದು ಉಳಿದ ಮೂವರು ಆರೋಪಿಗಳು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಈ ವೇಳೆ ಎರಡೂ ವಾಹನಗಳಲ್ಲಿದ್ದ 20 ಮಲ್ನಾಡ್ ಗಿಡ್ಡಗಳನ್ನು ರಕ್ಷಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.