ಜಿಲ್ಲೆ

ಜಾನಪದ ಹಾಡಿನಿಂದ ಜೀವನೋತ್ಸಾಹ ಹೆಚ್ಚಳ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

ಹುಬ್ಬಳ್ಳಿ: ಜಾನಪದ ಕಲೆಗೆ ಅದ್ಬುತ ಶಕ್ತಿ ಇದೆ. ಜೀವನದಲ್ಲಿ ಎಂತಹದೇ ಜಿಗುಪ್ಸೆ ಇದ್ದರೂ ಸುಮ್ಮನೇ ಕುಳಿತು ಎರಡು ಹಾಡು ಕೇಳಿದರೆ ಜೀವನೋತ್ಸಾಹ ಬರುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೂ ಭಾರತೀಯ ಸಂಪ್ರದಾಯದ ಹಾಡುಗಳು ಪ್ರೇರಣೆಯಾಗಿದ್ದವು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿಯ ಗಂಗಾಧರನಗರ ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಾನುವಾರ ಏರ್ಪಡಿಸಿದ್ದ ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ- ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಹಾಗೂ ಶಿಬಿರಾರ್ಥಿಗಳ ಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರು ಕೂಡ ಭಾರತೀಯ ಸಂಸ್ಕೃತಿಯ ಶಕ್ತಿ ಅರಿತು ಅದನ್ನು ನಾಶ ಮಾಡಲು ಹೊಂಚು ಹಾಕಿದರು. ಇದು ನಾಶವಾಗಬಾರದು ಎನ್ನುವ ಕಾರಣಕ್ಕೆ ಭಾರತ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ವರ್ಷ ಇಂತಹ ಜಾನಪದ ಕಲೆಗಳ ಸ್ಪರ್ಧೆ ಆಯೋಜಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ತರಬೇತಿ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಮಹೇಂದ್ರ ಕೌತಾಳ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯ ಸುಮಾರು 50 ಹೊಸ ಕಲಾವಿದರಿಗೆ ನಶಿಸಿಹೋಗುತ್ತಿರುವ ಕಲೆಗಳಲ್ಲಿ ತರಬೇತಿ ನೀಡಲಾಗಿದೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ನಡೆಯುತ್ತಿರುವ ವಿನೂತನ ಕಾರ್ಯಕ್ರಮ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅನಾದಿ ಕಾಲದಿಂದಲೂ ಜಾನಪದ ಕಲೆಗಳು ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಅನೇಕ ವರ್ಷಗಳಿಂದ ಸರ್ಕಾರ ಕಲೆಗಳ ಉಳಿವಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಇದೀಗ ತರಬೇತಿ ನೀಡಿದ ಕಲಾವಿದರಿಗೆ ಅವಕಾಶ ಕಲ್ಪಿಸುವ ಕೆಲಸವೂ ಆಗಬೇಕು. ಶಿಗ್ಗಾಂವಿಯ ಜಾನಪದ ವಿವಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಜಾನಪದ ಕಲೆ ಉಳಿಸಲು ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿ ಹಿರಿಯ ಕಲಾವಿದರ ಮೂಲಕ ತರಬೇತಿ ನೀಡಲಾಗಿದೆ. ಐದು ಕಲೆಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದರು.

ನಾಗೇಶ ಮಾಳಗಿ ಹೆಜ್ಜೆಮೇಳ, ಅರ್ಜುನ ಮಾದರ ಕರಡಿ ಮಜಲು, ಶಂಕ್ರಪ್ಪ ಮಾದರ ಜಗ್ಗಲಗಿ, ಪಾರವ್ವ ಲಮಾಣಿ ಲಂಬಾಣಿ ನೃತ್ಯ ಹಾಗೂ ಲಕ್ಷ್ಮೀಬಾಯಿ ಹರಿಜನ ಅವರು ಗೀಗೀ ಪದಗಳ ತರಬೇತಿಯನ್ನು ನೀಡಿದ್ದಾರೆ ಎಂದರು.

ಮತ್ತೊಬ್ಬ ಸಂಚಾಲಕ ಎಸ್.ಎಂ. ಬಿದರಳ್ಳಿ, ಪಾಲಿಕೆ ಸದಸ್ಯರಾದ ಮಂಜುಳಾ ಜಾಧವ, ಡಿ.ಎಸ್. ಮನಿಯಾರ, ನಿರಂಜನ ಹಿರೇಮಠ, ಇತರರು ಪಾಲ್ಗೊಂಡಿದ್ದರು.